ADVERTISEMENT

ತುಳು ಉತ್ಸವ: ಲಕ್ಷ ಜನರ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 5:57 IST
Last Updated 16 ಡಿಸೆಂಬರ್ 2017, 5:57 IST

ಮಂಗಳೂರು: ವಿಶ್ವ ತುಳುವೆರೆ ಆಯನೊ ಕೂಟ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇದೇ 23 ಮತ್ತು 24 ರಂದು ಪಿಲಿಕುಳ ನಿಸರ್ಗಧಾಮದ ತುಳು ಸಂಸ್ಕೃತಿ ಗ್ರಾಮದಲ್ಲಿ ನಡೆಯಲಿರುವ ತುಳುನಾಡೋಚ್ಚಯ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದ ಎಂಬ ನೆಲೆಗಟ್ಟಿನಲ್ಲಿ ಎರಡು ದಿನ ನಡೆಯುವ ಬೃಹತ್ ತುಳು ಉತ್ಸವಕ್ಕೆ ಸಮ್ಮೇಳನ ನಗರಿ ಸಜ್ಜುಗೊಳ್ಳುತ್ತಿದೆ. ದೇಶ ವಿದೇಶದ ಸಾಂಸ್ಕೃತಿಕ ನೇತಾರರು, ರಾಜಕೀಯ ನೇತಾರರು, ಸಚಿವರು, ಚಲನಚಿತ್ರ ತಾರೆಯರು ಸೇರಿದಂತೆ ಗಣ್ಯಾತಿಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ಈ ಉತ್ಸವದಲ್ಲಿ, 1 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಸಮ್ಮೇಳನ ನಗರಿಯಲ್ಲಿ ಬೃಹತ್ ಚಪ್ಪರದ ಕೆಲಸ ತ್ವರಿತಗತಿಯಲ್ಲಿ ಸಾಗುತ್ತಿದೆ. ಅತಿಥಿಗಳನ್ನು ಸ್ವಾಗತಿಸಲು ಬೃಹತ್ ಕಮಾನುಗಳು ತಲೆಯೆತ್ತಿವೆ. ತುಳುನಾಡಿನ ನಾಡು-ನುಡಿ, ಸಂಸ್ಕೃತಿಗೆ ಕನ್ನಡಿ ಹಿಡಿಯುವ ವೈವಿಧ್ಯಮಯ ತುಳುಗ್ರಾಮ ಸಿದ್ಧಗೊಳ್ಳುತ್ತಿದೆ. ತುಳುನಾಡಿನ ವೈವಿಧ್ಯಮಯ ತಿಂಡಿ ತಿನಿಸುಗಳೊಂದಿಗೆ ಆಹಾರೋತ್ಸವ ಹಾಗೂ ವಿವಿಧ ವ್ಯಾಪಾರಗಳಿಗಾಗಿ 200ಕ್ಕಿಂತಲೂ ಹೆಚ್ಚು ಮಳಿಗೆಗಳು ಸಿದ್ಧಗೊಳುತ್ತಿದೆ.

ADVERTISEMENT

ಮನೋರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹಿರಿಯ ಸಾಧಕರಿಗೆ ತುಳುರತ್ನ ಬಿರುದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ತುಳುನಾಡೋಚ್ಚಯ ಪ್ರಶಸ್ತಿ ಸಹಿತ ಗೌರವಾರ್ಪಣೆ ನಡೆಯಲಿದೆ. ವಾಮಂಜೂರು ಮೂಡುಶೆಡ್ಡೆ ಪ್ರದೇಶದ ವಿವಿಧ ಸಂಘ ಸಂಸ್ಥೆಗಳು ಉತ್ಸವದ ಸಿದ್ಧತೆಯಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.