ADVERTISEMENT

ಪೋಕ್ಸೊ ಪ್ರಕರಣ: ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 9:04 IST
Last Updated 8 ಸೆಪ್ಟೆಂಬರ್ 2017, 9:04 IST

ಪುತ್ತೂರು: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಯೊಬ್ಬನಿಗೆ ನೋಟ್ ಬುಕ್ ನೀಡಿದ್ದಳೆಂಬ ಕಾರಣವನ್ನು ನೆಪವಾಗಿರಿಸಿಕೊಂಡು, ಆಕೆಗೆ ಆ ಮುಸ್ಲಿಂ ವಿದ್ಯಾರ್ಥಿಯ ಜತೆ ಪ್ರೇಮ ಸಂಬಂಧವಿದೆ ಎಂದು ಊರಲ್ಲಿ ಅಪಪ್ರಚಾರ ನಡೆಸಿ ತೇಜೋವಧೆ ಮಾಡಿದ್ದಲ್ಲದೆ, ಆಕೆಯ ಬೆನ್ನ ಹಿಂದೆ ಬಿದ್ದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿ ಬೆದರಿಕೆಯೊಡ್ಡಿದ್ದ ಪ್ರಕರಣವೊಂದು ಸಂಪ್ಯ ಠಾಣೆಯಲ್ಲಿ ದಾಖಲಾಗಿದೆ.

ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಒಬ್ಬ ವಿದ್ಯಾರ್ಥಿಯೂ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಪಾದೆಲಾಡಿ ನಿವಾಸಿ, ಅಟೋ ಚಾಲಕನಾಗಿರುವ ಹರೀಶ್ ಮತ್ತು ಪಾದೆಲಾಡಿ ನಿವಾಸಿಯಾಗಿದ್ದು, ಸುಳ್ಯದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಮಂಜೇಶ್ ಬಂಧಿತ ಆರೋಪಿಗಳು.

ಸುಳ್ಯದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನ್ಯ ಕೋಮಿನ ವಿದ್ಯಾರ್ಥಿಯೊಬ್ಬನಿಗೆ ತನ್ನ ನೋಟ್ ಬುಕ್ ನೀಡಿದ್ದರು. ಈ ವಿದ್ಯಾರ್ಥಿನಿ, ಮುಸ್ಲಿಂ ವಿದ್ಯಾರ್ಥಿಗೆ ನೋಟ್ ಬುಕ್ ನೀಡುವ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದ ಅಲ್ಲಿನ ವಿದ್ಯಾರ್ಥಿಯೊಬ್ಬ, ಈ ದೃಶ್ಯವನ್ನು ಆರೋಪಿಗಳಿಗೆ ರವಾನಿಸಿದ್ದ ಎನ್ನಲಾಗಿದೆ.

ADVERTISEMENT

ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ರವಾನಿಸಿ, ಆಕೆಗೆ ಮುಸ್ಲಿಂ ಯುವಕನ ಜತೆ ಪ್ರೇಮ ಸಂಬಂಧವಿದೆ ಎಂದು ಹರೀಶ್ ಮತ್ತು ಮಂಜೇಶ್ ಅಪಪ್ರಚಾರ ಮಾಡಿ ತೇಜೋವಧೆ ಮಾಡಿದ್ದರೆಂದು ಆರೋಪಿಸಲಾಗಿದೆ.

ಆರೋಪಿಗಳ ಪೈಕಿ ವಿದ್ಯಾರ್ಥಿಯಾಗಿರುವ ಮಂಜೇಶ್ ಮತ್ತು ಈ ವಿದ್ಯಾರ್ಥಿನಿ ಒಂದೇ ಕಡೆಯಿಂದ ಬಸ್‌ನಲ್ಲಿ ಕಾಲೇಜಿಗೆ ತೆರಳುವವರಾಗಿದ್ದು, ಹರೀಶ್ ಮತ್ತು ಮಂಜೇಶ್ ಸೇರಿಕೊಂಡು ಆಕೆಯನ್ನು ಹಿಂಬಾಲಿಸಲು ಆರಂಭಿಸಿದ್ದರು. ಆಕೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದರು. ಅಲ್ಲದೇ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿತ್ತು. ವಿದ್ಯಾರ್ಥಿನಿಯು ಈ ವಿಚಾರವನ್ನು ತಿಳಿಸಿದ ಮೇರೆಗೆ ಆಕೆಯ ಮನೆಯವರು ಈ ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಸಂಪ್ಯ ಠಾಣಾ ಪೊಲೀಸರು ಪೋಕ್ಸೊ ಕಾಯ್ದೆಯಡಿ ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬುಧವಾರ ಅವರನ್ನು ಬಂಧಿಸಿ, ಮಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.