ADVERTISEMENT

ಫಲ್ಗುಣಿಯಲ್ಲಿ ಮತಜಾಗೃತಿಗಾಗಿ ಜಲಥಾನ್‌

ಮತದಾನದ ಸಂದೇಶ ಹೊತ್ತು ಸಾಗಿದ ಹತ್ತು ದೋಣಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 11:00 IST
Last Updated 9 ಏಪ್ರಿಲ್ 2018, 11:00 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಭಾನುವಾರ ಸಂಜೆ ಫಲ್ಗುಣಿ ನದಿಯಲ್ಲಿ ‘ಜಲಥಾನ್‌’ ನಡೆಯಿತು. ಸ್ವೀಪ್‌ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹತ್ತು ದೋಣಿಗಳಲ್ಲಿ ಸುಮಾರು ಮೂರು ಕಿಲೋಮೀಟರ್‌ ದೂರ ಸಾಗಿ ಮತದಾನದ ಮಹತ್ವವನ್ನು ಸಾರಿದರು.

ನಗರದ ಬೊಕ್ಕಪಟ್ಣ ಕಲ್ಲುರ್ಟಿ ದೈವಸ್ಥಾನದ ಬಳಿಯಿಂದ ಹೊರಟ ಜಲಥಾನ್‌ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಚಾಲನೆ ನೀಡಿದರು. ಚೆಂಡೆ, ಬಣ್ಣದವೇಷಗಳ ಜೊತೆ ಜಲಥಾನ್ ಸಾಗಿತು. ಸ್ವೀಪ್‌ ಸಮಿತಿ ಅಧ್ಯಕ್ಷರಾದ ಡಾ.ಎಂ.ಆರ್‌.ರವಿ, ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್‌ ನಜೀರ್‌, ಸ್ವೀಪ್‌ ಸಮಿತಿ ಕಾರ್ಯದರ್ಶಿ ಕೆ. ಸುಧಾಕರ್‌, ಜಾದೂಗಾರ ಕುದ್ರೋಳಿ ಗಣೇಶ್‌ , ಮೀನುಗಾರಿಕಾ ಇಲಾಖೆ ಡಿಡಿ ಡಾ.ಸುಷ್ಮಿತಾ ರಾವ್‌ , ಪ್ರೊ. ವಿನೀತಾ ರೈ ಜಲಥಾನ್‌ನಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು.

ಜಲಥಾನ್‌ ಸುಲ್ತಾನ್‌ ಬತ್ತೇರಿ ಫೆರಿ ಬಳಿ ಸಮಾರೋಪಗೊಂಡಿತು. ಅಲ್ಲಿ ಸೇರಿದ್ದ ಪ್ರವಾಸಿಗರು, ಮೊಗವೀರ ಸಮುದಾಯದವರು, ಸಾರ್ವಜನಿಕರಿಗೆ ಇವಿಎಂನಲ್ಲಿ ಮತದಾನ ಮಾಡುವ ಮತ್ತು ವಿವಿಪ್ಯಾಟ್‌ ಮೂಲಕ ಮತ ಖಾತರಿ ಮಾಡಿಕೊಳ್ಳುವ ಪ್ರಾತ್ಯಕ್ಷಿಕೆ ಯನ್ನು ನೀಡಲಾಯಿತು. ಮತದಾರರು ಚಲಾಯಿಸಿದ ಮತ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಲು ಒದಗಿಸಿರುವ ಹೊಸ ಅವಕಾಶವನ್ನು ಬಳಸಿಕೊಳ್ಳುವಂತೆ ವಿವರಣೆ ನೀಡಲಾಯಿತು.

ADVERTISEMENT

ಬಳಿಕ ಸ್ವೀಪ್‌ ಸಮಿತಿ ಸದಸ್ಯರು ಮಾನವ ಸರಪಳಿ ರಚಿಸಿ ಮತದಾನದ ಮಹತ್ವ ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ.ಆರ್‌.ರವಿ, ‘ ಈ ಬಾರಿ ಮತದಾನದಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಸಾಗಿದೆ. ಅಂಗವಿಕಲರು, ನಿರ್ಲಕ್ಷಿತ ಸಮುದಾಯದವರು ಮತದಾನಕ್ಕೆ ಬರುವಂತಾಗಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೂ ಮತದಾನದಲ್ಲಿ ಭಾಗವಹಿಸುವಂತೆ ತಿಳಿಸಲಾಗಿದ್ದು, ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಹೆಸರು ನೋಂದಾಯಿಸಿದ್ದಾರೆ. ಪ್ರಜಾಪ್ರಭು ತ್ವವನ್ನು ಉಳಿಸುವ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾ ಬ್ದಾರಿಯಿಂದ ಪ್ರತಿ ಅರ್ಹ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು’ ಎಂದರು.

ಜಲಥಾನ್‌ ಎಂಬ ಕಾರ್ಯಕ್ರ ಮವನ್ನು ಕಡಲದಂಡೆಯ ಊರಿ ನಲ್ಲಿ ಮಾತ್ರ ಮಾಡಲು ಸಾಧ್ಯ. ಮೀನುಗಾ ರರಿಗೆ ಮತದಾನದ ಮಹತ್ವ ವಿವರಿಸುವ ಉದ್ದೇಶದಿಂದ ಈ ವಿನೂತನ ಪ್ರಯತ್ನ ಸಾಗಿದೆ. ಮತದಾರರೆಲ್ಲರೂ ಮತ ಗಟ್ಟೆಗೆ ಬಂದಾಗ ಇಂತಹ ಪ್ರಯತ್ನ ಯಶಸ್ವಿ ಯಾಗುತ್ತದೆ ಎಂದು ಜಾದೂಗಾರ ಕುದ್ರೋಳಿ ಗಣೇಶ್‌ ತಿಳಿಸಿದರು.ಬೋಳೂರು ಮೊಗವೀರ ಮಹಾಸಭಾ ಮತ್ತು ಮೀನುಗಾರಿಕಾ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.