ADVERTISEMENT

‘ಶರತ್‌ ಜೀವನ ಸಂದೇಶ ಯುವಕರಿಗೆ ಪ್ರೇರಣೆ’

ಆರ್ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ ಉತ್ತರಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 5:52 IST
Last Updated 21 ಜುಲೈ 2017, 5:52 IST

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಉದಯ ಲಾಂಡ್ರಿಯಲ್ಲಿ ಇದೇ 4ರಂದು ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಕುಮಾರ್ ಅವ ರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಎಲ್ಲ ಸಹಕಾರ ಮತ್ತು ಸಹಾನುಭೂತಿ ಅಗತ್ಯವಿದೆ ಎಂದು ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಹೇಳಿದರು.

ತಾಲ್ಲೂಕಿನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಸಭಾಂಗಣದಲ್ಲಿ ಗುರುವಾರ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಕುಮಾರ್ ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಸಂತಾಪ ಸೂಚಿಸಿ ಮಾತನಾಡಿದರು.

ಪರಿಶ್ರಮಿಯಾಗಿದ್ದ ಶರತ್ ಕುಮಾರ್ ಅಕಾಲಿಕ ಅಗಲುವಿಕೆಯು ಮೃತರ ಕುಟುಂಬ ಮಾತ್ರವಲ್ಲದೆ, ಸಂಘಟನೆ ಮತ್ತು ಸಮಾಜಕ್ಕೆ ದೊಡ್ಡ ಅಘಾತ ಉಂಟಾಗಿದೆ.

ADVERTISEMENT

ಶರತ್‌ ಜೀವನ ಸಂದೇಶವು ಪ್ರತಿಯೊಬ್ಬ ಯುವಕರಿಗೆ ಪ್ರೇರಣೆಯಾಗಿದೆ. ಹಿಂದೂ ಸಂಘಟನೆ ಬಲಿಷ್ಟವಾದರೆ ಅದುವೇ ಆತನ ಆತ್ಮಕ್ಕೆ ನಾವು ಸಲ್ಲಿಸುವ ಗೌರವವಾಗುತ್ತದೆ. ಶರತ್‌ ಆತ್ಮಕ್ಕೆ ಶಾಂತಿ ಮತ್ತು ಸದ್ಗತಿ ಸಿಗಲಿ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಮೃತರ ತಂದೆ ತನಿಯಪ್ಪ ಮಡಿವಾಳ ಮತ್ತು ಕುಟುಂಬಿಕರು, ಸಂಸದ ನಳಿನ್ ಕುಮಾರ್ ಕಟೀಲು, ಪ್ರಮುಖರಾದ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಸೇರಿದಂತೆ ಅಪಾರ ಮಂದಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಶಾಂತಿ ಮಂತ್ರ ಪಠಿಸಿದರು.

**

ಪೊಲೀಸ್ ಬಿಗಿ ಬಂದೋಬಸ್ತ್‌

ಬಿ.ಸಿ.ರೋಡ್, ಗೂಡಿನಬಳಿ, ಪಾಣೆಮಂಗಳೂರು, ಮೆಲ್ಕಾರ್, ಮಾರ್ನಬೈಲು, ನಂದಾವರ ಮತ್ತಿತರ ಕಡೆಗಳಲ್ಲಿ ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್‌ ಏರ್ಪಡಿಸಿದ್ದರು. ಈ ಪ್ರದೇಶದ ವಿವಿಧ ಧಾರ್ಮಿಕ ಕೇಂದ್ರಗಳ ಬಳಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ವಿಡಿಯೊ ಚಿತ್ರೀಕರಣ ನಡೆಸುವ ಮೂಲಕ ಮಫ್ತಿ ಪೊಲೀಸರು ಕೂಡಾ ಅಲ್ಲಲ್ಲಿ ಗಸ್ತು ತಿರುಗುತ್ತಿದ್ದ ದೃಶ್ಯ ಕಂಡು ಬಂದಿದೆ. ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಡಾ.ಅರುಣ್, ಇನ್‌ಸ್ಪೆಕ್ಟರ್ ಪ್ರಕಾಶ್, ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.