ADVERTISEMENT

ಸಚಿವ ರೈ ವಿರುದ್ಧ ಜಿಲ್ಲಾಧಿಕಾರಿಗೆ ದೂರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:33 IST
Last Updated 17 ನವೆಂಬರ್ 2017, 5:33 IST

ಮಂಗಳೂರು: ಸಚಿವ ಬಿ.ರಮಾನಾಥ ರೈ ಅವರು ಕಾನೂನು ಬಾಹಿರವಾಗಿ ಜಮೀನನ್ನು ಅತಿಕ್ರಮಣ ಮಾಡಿರುವ ಬಗ್ಗೆ ಭಾರತೀಯ ಜನತಾ ಪಕ್ಷದಿಂದ ಜಿಲ್ಲಾಧಿಕಾರಿಗೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡುವುದಾಗಿ ಪಕ್ಷದ ಮಾಧ್ಯಮ ಕಾರ್ಯದರ್ಶಿ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭೂಸುಧಾರಣಾ ಕಾಯ್ದೆ 1961 ಮತ್ತು ಭೂಸುಧಾರಣಾ ನಿಯಮ 108ರ ಪ್ರಕಾರ ಅರ್ಜಿದಾರರ ಕುಟುಂಬದ ಆಸ್ತಿ 10 ಯೂನಿಟ್‌ಗಿಂತ ಹಾಗೂ ಆದಾಯ 2 ಲಕ್ಷಕ್ಕಿಂತ ಹೆಚ್ಚಾಗಿರಬಾರದು ಎಂದಿದೆ. ಸಚಿವ ಬಿ.ರಮಾನಾಥ ರೈ ಅವರ ಆಸ್ತಿ 15.25 ಎಕರೆ ಹಾಗೂ ಅವರ ಪತ್ನಿಯ ಹೆಸರಿನಲ್ಲಿ 1.90 ಎಕರೆ ಭೂಮಿಯನ್ನು ಹೊಂದಿದ್ದಾರೆ. ಸರ್ಕಾರಿ ಜಾಗವನ್ನು ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದಾರೆ. ಇವುಗಳಿಗೆ ದಾಖಲೆಗಳು ಇವೆ ಎಂದು ಸಚಿವರು ತಿಳಿಸಿದ್ದಾರೆ. ಆದರೆ ಆ ದಾಖಲೆಯನ್ನು ಯಾವ ರೀತಿಯಲ್ಲಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು. ಆ ದಾಖಲೆಗಳೇ ಸರಿ ಇಲ್ಲ ಎಂದು ಅವರು ದೂರಿದ್ದಾರೆ.

ಸರ್ಕಾರ ಬಂಟ್ವಾಳದ ಕಳ್ಳಿಗೆ ಗ್ರಾಮವನ್ನು ಪೋಡಿಮುಕ್ತ ಗ್ರಾಮವನ್ನಾಗಿಸಬೇಕು ಎಂದು ಆದೇಶ ಹೊರಡಿಸಿದೆ. ಕಳ್ಳಿಗೆ ಗ್ರಾಮದಲ್ಲಿರುವ 97/1 ಸರ್ವೆ ನಂಬರ್ ನ 28 ಎಕರೆ ಜಮೀನನ್ನು ಅತಿಕ್ರಮಿಸಿದ್ದು ಅದರಲ್ಲಿ 10 ಎಕರೆ ಭೂಮಿಯಲ್ಲಿ ರಬ್ಬರ್ ಬೆಳೆಯನ್ನು ಬೆಳೆಸಿರುತ್ತಾರೆ. ಪೋಡಿ ಮುಕ್ತ ಗ್ರಾಮದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇದರಲ್ಲೂ ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿ ಆ ಸರ್ವೆ ನಂಬರ್ ಅನ್ನು ಪೋಡಿ ಮುಕ್ತ ಗ್ರಾಮದಿಂದ ತೆಗೆದಿರುವುದಕ್ಕೆ ಸಚಿವರು ನೇರವಾಗಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಯೋಗೀಶ್ ಭಟ್, ನಿತಿನ್‌ ಕುಮಾರ್, ಸಂಜಯ್ ಪ್ರಭು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.