ADVERTISEMENT

₹ 5 ಕೋಟಿ ಅನುದಾನ– ಕೇವಲ 3 ಕೆರೆ ಅಭಿವೃದ್ಧಿ...!

ಕೆಡಿಪಿ ಸಭೆಯಲ್ಲಿ ಗಂಭೀರತೆ ಇಲ್ಲದ ವ್ಯರ್ಥ ಚರ್ಚೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 5:10 IST
Last Updated 2 ಜುಲೈ 2016, 5:10 IST

ಪುತ್ತೂರು: ಪುತ್ತೂರು ತಾಲ್ಲೂಕಿಗೆ ಕೆರೆಗಳ ಅಭಿವೃದ್ಧಿಗಾಗಿ ಮೂರೂವರೆ ವರ್ಷದ ಹಿಂದೆ ಮಂಜೂರಾಗಿದ್ದ ₹ 5 ಕೋಟಿಯಲ್ಲಿ ತಾಲ್ಲೂಕಿನ 33 ಕೆರೆಗಳ ಪೈಕಿ ಬರೀ ಮೂರು ಕೆರೆಗಳನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದ್ದು, ಉಳಿದ ಹಣ ಏನಾಗಿದೆ ಎನ್ನುವುದಕ್ಕೆ ಸ್ಪಷ್ಟತೆ ಇಲ್ಲದ, ಯಾವುದೇ ನಿರ್ಣಯವೂ ಇಲ್ಲದ ವ್ಯರ್ಥ ಚರ್ಚೆ ಶುಕ್ರವಾರ ಪುತ್ತೂರು ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಸಮಯ ನುಂಗಿತು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪಾಲನಾ ವರದಿಯ ಸಂದರ್ಭದಲ್ಲಿ ಸಭೆಯ ಅಧ್ಯಕ್ಷೆ ವಹಿಸಿದ್ದ ಶಾಸಕಿ ಶಕುಂತಳಾ ಶೆಟ್ಟಿ ಅವರೇ ಈ ಪ್ರಶ್ನೆಯನ್ನು ಎತ್ತಿದ್ದರು.

ಶಾಸಕಿಯವರ ಪ್ರಶ್ನೆಗೆ ಉತ್ತರಿಸಿದ ಇಲಾಖೆಯ ಅಧಿಕಾರಿ, ತಾಲ್ಲೂಕಿನ 33 ಕೆರೆಗಳ ಪೈಕಿ ಸಂಪ್ಯದ ಕೆರೆಯನ್ನು ಮಾತ್ರ ಅಭಿವೃದ್ಧಿ ಪಡಿಸಲಾಗಿದೆ ಎಂದು ಆರಂಭದಲ್ಲಿ ಉತ್ತರಿಸಿದರು. ಉಳಿದ ಹಣ ಏನಾಗಿದೆ ಎಂದು ಶಾಸಕಿ ಮರುಪ್ರಶ್ನಿಸಿದಾಗ ಐತ್ತೂರಿನಲ್ಲೂ ಆಗಿದೆ, ಕಡಬದಲ್ಲಿನ ಒಂದು ಕೆರೆಯನ್ನು ಜೀರ್ಣೋದ್ಧಾರ ಪಡಿಸಲಾಗಿದೆ.

ಉಪ್ಪಿನಂಗಡಿಯಲ್ಲಿನ ಕೆರೆಯ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದ್ದರೂ ಯಾರೂ ಬಂದಿಲ್ಲ. ಟೆಂಡರ್‌ಗೆ ಹಣ ಮಂಜೂರಾಗಿತ್ತು ಎಂದು ಉತ್ತರ ನೀಡಿದರು. ಕೆರೆಗಳ ಅಭಿವೃದ್ಧಿಗಾಗಿ ಮಂಜೂರಾದ ಹಣ ವ್ಯರ್ಥವಾಗಿದ್ದರೂ, ಆ ಬಗ್ಗೆ ಸ್ಪಷ್ಟ ಮಾಹಿತಿ ಸಂಬಂಧಪಟ್ಟ ಅಧಿಕಾರಿಯಿಂದ ಸಿಗದಿದ್ದರೂ ಆ ವಿಚಾರವನ್ನು ಲಘುವಾಗಿ ಪರಿಗಣಿಸಿ, ಮಂಜೂರು ಆದ ಹಣ ಲ್ಯಾಪ್ಸ್ ಆಗಿರಬೇಕಲ್ಲವೇ ಎನ್ನುವ ಮೂಲಕ ಶಾಸಕಿಯೇ ಈ ವಿಚಾರಕ್ಕೆ ತೆರೆ ಎಳೆದರು.

ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳಾಗಲೀ, ಕೆಡಿಪಿ ನಾಮ ನಿರ್ದೇಶಿತ ಸಮಸ್ಯರಾಗಲೀ ಕೆರೆಗಳ ಅಭಿವೃದ್ಧಿಗೆ ಬಂದ ಹಣ ಏನಾಗಿದೆ ಎಂಬ ಕುರಿತು ಸ್ಪಷ್ಟತೆ ಬಯಸಲು ಮುಂದಾಗದ  ಮತ್ತು ಈ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸದ ಕಾರಣ ಯಾವುದೇ ನಿರ್ಣಯವಿಲ್ಲದೆ ಉಳಿದುಕೊಂಡಿತು.

ಕೆರೆ ಅತಿಕ್ರಮಣ: ಕೆಡಿಪಿ ನಾಮನಿರ್ದೇಶಿತ ಸದಸ್ಯ ಸರ್ವೋತ್ತಮ ಗೌಡ ಅವರು ನೆಲ್ಯಾಡಿಯಲ್ಲಿನ ಕೆರೆ ಅತಿಕ್ರಮಣವಾಗಿದೆ. ಕುಡಿಯುವ ನೀರಿಗೆ ಬರಗಾಲ ಬರುತ್ತಿದೆ.ಕಂದಾಯ ಇಲಾಖೆಯವರು ಕೆರೆ ಅತಿಕ್ರಮಣದ ಕುರಿತು ಏನುಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಕೆಡಿಪಿ ನಾಮನಿದರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್ ದನಿಗೂಡಿಸಿದರು.

ನೆಲ್ಯಾಡಿಯಲ್ಲಿ ಕೆರೆ ಅತಿಕ್ರಮಣವಾದ ಕುರಿತು ಅಳತೆ ಮಾಡಲು ಈಗಾಗಲೇ ಸರ್ವೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಪುಟ್ಟು ಶೆಟ್ಟಿ ಅವರು ತಿಳಿಸಿದರು. ಅತಿಕ್ರಮಣ ಯಾರೇ ಪ್ರಭಾವಶಾಲಿ ವ್ಯಕ್ತಿ ಮಾಡಿರಲಿ, ನೀವು ತಾಲ್ಲೂಕಿನ ‘ಪವರ್‌ಫುಲ್‌’ ಅಧಿಕಾರಿಯಾಗಿದ್ದೀರ, ನಿಮ್ಮ ಪವರ್ ತೋರಿಸಿ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಹಶೀಲ್ದಾರರಿಗೆ ಸೂಚಿಸಿದರು.

ನೆರೆ ಕಾಯುತ್ತ...?: ಕಳೆದ ಕೆಲ ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದ ಕಾರಣ ಉಪ್ಪಿನಂಗಡಿಯಲ್ಲಿ ನೆರೆ ಭೀತಿ ಎದುರಾಗಿತ್ತು. ಜನತೆ ಆತಂಕಿತರಾಗಿದ್ದರು. ಆದರೆ ಉಪ್ಪಿನಂಗಡಿಯಲ್ಲಿ ಈ ಬಾರಿ ನೆರೆ ಮುಂಜಾಗ್ರತಾ ಸಭೆ ನಡೆದಿಲ್ಲ. ಇದಕ್ಕೆ ಕಾರಣವೇನು ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕ್ಕಾರ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಮುಕುಂದ, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್, ಕಡಬ ತಹಶೀಲ್ದಾರ್ ನಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.