ADVERTISEMENT

ಬಿಜೆಪಿ ಕಾರ್ಯಕರ್ತರು– ಮುಸ್ಲಿಮರ ನಡುವೆ ಘರ್ಷಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 6:23 IST
Last Updated 22 ಫೆಬ್ರುವರಿ 2018, 6:23 IST

ಮಂಗಳೂರು: ಬಿಜೆಪಿ ಕಾರ್ಯಕರ್ತರು ಮತ್ತು ಮುಸ್ಲಿಮರ ಗುಂಪಿನ ನಡುವೆ ಪಣಂಬೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಂಗರೆಯಲ್ಲಿ ಮಂಗಳವಾರ ತಡರಾತ್ರಿ ಘರ್ಷಣೆ ನಡೆದಿದೆ. ಕಲ್ಲು ತೂರಾಟದಲ್ಲಿ ನಾಲ್ವರು ಯುವಕರು ಮತ್ತು ಒಬ್ಬ ಸಬ್‌ ಇನ್‌ಸ್ಪೆಕ್ಟರ್‌ ಗಾಯಗೊಂಡಿದ್ದಾರೆ.

ಉಡುಪಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮೀನುಗಾರರ ಸಮಾವೇಶಕ್ಕೆ ತೋಟ ಬೆಂಗರೆಯ ಬಿಜೆಪಿ ಕಾರ್ಯಕರ್ತರು ನಾಲ್ಕು ಬಸ್‌ಗಳಲ್ಲಿ ಹೋಗಿದ್ದರು. ತಡರಾತ್ರಿ ವಾಪಸ್‌ ಬರುತ್ತಿದ್ದಾಗ ಕಸಬಾ ಬೆಂಗರೆ ಬಳಿ ಒಂದು ಬಸ್ಸಿನಲ್ಲಿದ್ದವರು ಘೋಷಣೆ ಕೂಗಿದ್ದಾರೆ. ಅದನ್ನು ಆಕ್ಷೇಪಿಸಿ ಸ್ಥಳೀಯ ಮುಸ್ಲಿಮರು ರಸ್ತೆಗೆ ಕಲ್ಲುಗಳನ್ನು ಅಡ್ಡವಿರಿಸಿ ಬಸ್‌ ತಡೆದಿದ್ದಾರೆ. ಆ ನಂತರ ಎರಡೂ ಗುಂಪಿನ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸಬಾ ಬೆಂಗರೆಯಲ್ಲಿ ಬಸ್‌ ತಡೆದಾಗ ಎರಡೂ ಗುಂಪಿನವರು ಜಗಳವಾಡಿಕೊಂಡಿದ್ದರು. ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ಪರಿಸ್ಥಿತಿ ತಿಳಿಯಾಗುವ ಹಂತಕ್ಕೆ ಬಂದಿತ್ತು. ಆದರೆ, ಅಷ್ಟರಲ್ಲಾಗಲೇ ಸುದ್ದಿ ತೋಟ ಬೆಂಗರೆಗೆ ಹಬ್ಬಿತ್ತು. ಅಲ್ಲಿಗೆ ಪೆಟ್ರೋಲ್‌ ತರಲು ತೆರಳಿದ್ದ ಯುವಕನೊಬ್ಬನ ಮೇಲೆ ಗುಂಪೊಂದು ಹಲ್ಲೆಗೆ ಯತ್ನಿಸಿತ್ತು. ಆತನಿಗೆ ಇರಿದಿದ್ದಾರೆ ಎಂಬ ಸುದ್ದಿ ಕಸಬಾ ಬೆಂಗರೆಗೆ ತಲುಪಿತು. ಇದು ಪರಿಸ್ಥಿತಿ ಮತ್ತೆ ಉದ್ವಿಗ್ನಗೊಳ್ಳಲು ಕಾರಣವಾಯಿತು.

ADVERTISEMENT

ಕಲ್ಲು ತೂರಾಟ: ಕಸಬಾ ಬೆಂಗರೆಯಿಂದ ಮುಸ್ಲಿಮರು ಗುಂಪಾಗಿ ತೋಟ ಬೆಂಗರೆಯತ್ತ ಹೋಗಿದ್ದಾರೆ. ಅಲ್ಲಿ ಮತ್ತೆ ಎರಡೂ ಗುಂಪಿನ ನಡುವೆ ಘರ್ಷಣೆ ಆರಂಭವಾಗಿದೆ. ಎರಡೂ ಕಡೆಯಿಂದ ಕಲ್ಲು ತೂರಾಟ ಆರಂಭವಾಗಿದೆ. ಸ್ಥಳದಲ್ಲಿದ್ದ ಪಣಂಬೂರು ಠಾಣೆಯ ಹತ್ತು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಪೊಲೀಸರ ಮೇಲೂ ಕೆಲವರು ಕಲ್ಲು ತೂರಿದ್ದಾರೆ.

ಎರಡು ಪೊಲೀಸ್ ವಾಹನಗಳಿಗೆ ಹಾನಿಯಾಗಿದ್ದು, ಪಣಂಬೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್ ಪೂವಪ್ಪ ಅವರಿಗೆ ಗಾಯವಾಗಿದೆ. ರಾಹುಲ್‌, ಲೋಕೇಶ್‌, ವಿಪಿನ್‌ ಮತ್ತು ಅಮೀರ್‌ ಎಂಬುವವರಿಗೆ ಕಲ್ಲು ತೂರಾಟದಲ್ಲಿ ಗಾಯಗಳಾಗಿವೆ.

ನಂತರ ಪಣಂಬೂರು ಠಾಣೆ ಇನ್‌ಸ್ಪೆಕ್ಟರ್ ಕೆ.ಎಂ.ರಫೀಕ್‌ ಒಂಬತ್ತು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಷ್ಟರಲ್ಲಿ ಹೆಚ್ಚುವರಿ ಪೊಲೀಸ್‌ ಪಡೆಗಳು ಘಟನಾ ಸ್ಥಳ ತಲು‍ಪಿದವು. ತಕ್ಷಣವೇ ಲಾಠಿ ಪ್ರಹಾರ ಮಾಡಿ ಎರಡೂ ಗುಂಪಿನವರನ್ನು ಚದುರಿಸಲಾಯಿತು. ಆ ನಂತರ ಎರಡೂ ಕಡೆಯ ಕೆಲವರ ನೇತೃತ್ವದಲ್ಲಿ ಸಭೆ ನಡೆಸಿ, ಶಾಂತಿ ಸ್ಥಾಪನೆಗೆ ಪ್ರಯತ್ನವೂ ನಡೆದಿತ್ತು.

ಮನೆ, ಮಸೀದಿಗೆ ಕಲ್ಲು: ರಾತ್ರಿ 12 ಗಂಟೆಯ ಬಳಿಕ ಬೈಕ್‌ನಲ್ಲಿ ಬಂದ ಕೆಲವರು ಬೆಂಗರೆಯ ಹೈದರ್‌ ಎಂಬುವವರ ಮನೆಗೆ ಕಲ್ಲು ತೂರಿದರು. ಅವರ ಮನೆಯ ಕಿಟಕಿ, ಬಾಗಿಲುಗಳಿಗೆ ಹಾನಿಯಾಗಿದೆ. ಮನೆಯ ಎದುರು ನಿಲ್ಲಿಸಿದ್ದ ಅವರ ಸ್ಕೂಟರ್‌ಗೂ ಹಾನಿ ಮಾಡಲಾಗಿದೆ. ಪಕ್ಕದಲ್ಲೇ ಇರುವ ಮಸೀದಿಯ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ತಕ್ಷಣವೇ ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ  ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು.

ಬುಧವಾರ ಬೆಳಿಗ್ಗೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುರೇಶ್, ‘ಎರಡೂ ಕಡೆಯಿಂದಲೂ ಕಲ್ಲು ತೂರಾಟ ನಡೆದಿದೆ. ಕೆಲವು ಪೊಲೀಸರಿಗೂ ಗಾಯಗಳಾಗಿವೆ. ಕಲ್ಲು ತೂರಾಟದಲ್ಲಿ ಭಾಗಿಯಾದ ನಾಲ್ವರಿಗೆ ಗಾಯಗಳಾಗಿವೆ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ಒಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾದ ಎರಡೂ ಕಡೆಯವರು ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ’ ಎಂದರು.

ಬೆಂಗರೆ ಪ್ರದೇಶದಲ್ಲಿ ಕೆಎಸ್‌ಆರ್‌ಪಿಯ ನಾಲ್ಕು ತುಕಡಿಗಳು ಸೇರಿದಂತೆ 200 ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಎರಡೂ ಕಡೆಯ ಪ್ರಮುಖರನ್ನು ಒಳಗೊಂಡಂತೆ ಶಾಂತಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.