ADVERTISEMENT

ಕುಮಾರ ಪರ್ವದಲ್ಲಿ ಕರಾವಳಿ ಕಡೆಗಣನೆ: ಪ್ರತಿಪಕ್ಷಗಳ ಆಕ್ರೋಶ

ಸಚಿವ ಯು.ಟಿ. ಖಾದರ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 13:12 IST
Last Updated 5 ಜುಲೈ 2018, 13:12 IST
ಯು.ಟಿ. ಖಾದರ್ (ಸಂಗ್ರಹ ಚಿತ್ರ)
ಯು.ಟಿ. ಖಾದರ್ (ಸಂಗ್ರಹ ಚಿತ್ರ)   

ಮಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಅನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ್ದು, ಕರಾವಳಿ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಆರೋಪ ಕೇಳಿಬರುತ್ತಿದೆ. ಸುದೀರ್ಘ ಬಜೆಟ್‌ ಭಾಷಣದಲ್ಲಿ ಕರಾವಳಿಯನ್ನು ಪ್ರಸ್ತಾಪಿಸದೇ ಇರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

₹2,18,488 ಕೋಟಿ ಗಾತ್ರದ ಬಜೆಟ್‌ನಲ್ಲಿ ಬೆಂಗಳೂರು, ಮಂಡ್ಯ, ಹಾಸನ, ರಾಮನಗರ, ಮೈಸೂರು ಭಾಗಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಬಜೆಟ್‌ನಲ್ಲಿ ಎಲ್ಲಿಯೂ ‘ಕರಾವಳಿ’ ಎನ್ನುವ ಪದವನ್ನೇ ಬಳಸದೆ ಚುನಾವಣೆಯ ಫಲಿತಾಂಶದ ಪ್ರತೀಕಾರ ಸಾಧಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

‘ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕೇವಲ ರಾಮನಗರ, ಮೈಸೂರು, ಮಂಡ್ಯ ಹಾಗೂ ಹಾಸನಕ್ಕೆ ಸೀಮಿತವಾದ ಬಜೆಟ್. ಇದು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿಲ್ಲದ, ಕೇವಲ ರಾಜಕೀಯ ಹಿತಾಸಕ್ತಿಯ ಬಜೆಟ್ ಆಗಿದೆ’ ಎಂದು ಶಾಸಕ ಹರೀಶ್‌ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕರಾವಳಿಯ ಬಗ್ಗೆ ಒಂದೇ ಒಂದು ಶಬ್ದವನ್ನು ಹೇಳದೆ, ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ದ್ವೇಷ ರಾಜಕೀಯವನ್ನು ಮಾಡಿರುವ ಕುಮಾರಸ್ವಾಮಿಯವರ ಬಜೆಟ್, ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬಜೆಟ್’ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಇಲ್ಲಿಯ ತನಕ ಕರ್ನಾಟಕದಲ್ಲಿ ಹಲವು ಬಜೆಟ್ ಗಳು ಮಂಡನೆಯಾಗಿವೆ. ಆದರೆ ಇಂತಹ ದ್ವೇಷ ರಾಜಕಾರಣವನ್ನು ಕರಾವಳಿಯ ಜನ ನೋಡಿಲ್ಲ. ಆರೋಗ್ಯ, ನಗರಾಭಿವೃದ್ಧಿ, ನೀರಾವರಿ, ಲೋಕೋಪಯೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಕಡೆಗಣಿಸಿರುವ ಕುಮಾರಸ್ವಾಮಿ, ಕೇವಲ ಹಾಸನ, ಮಂಡ್ಯ, ರಾಮನಗರ ಕೇಂದ್ರೀಕೃತ ಬಜೆಟ್ ಮಂಡಿಸಿದ್ದಾರೆ ಎಂದು ದೂರಿದ್ದಾರೆ.

‘ಈ ಬಜೆಟ್ ಕರಾವಳಿ ಮತ್ತು ಮಲೆನಾಡನ್ನು ಸಂಪೂರ್ಣವಾಗಿ ಕಡೆಗಣಿಸಿ, ರಾಜಕೀಯವಾಗಿ ತನ್ನ ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಮುಖ್ಯಮಂತ್ರಿಗಳು ಕೇವಲ ಹಳೆಮೈಸೂರಿಗೆ ಸೀಮಿತವಾಗಿರುವುದು ಈ ಬಜೆಟ್‌ನಿಂದ ಸ್ಪಷ್ಟವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡದಿರುವುದು ಆಶ್ಚರ್ಯ ಹಾಗೂ ಇದು ಭವಿಷ್ಯದ ದೃಷ್ಟಿಯಲ್ಲಿ ಮಾರಕ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್ ಹೇಳಿದ್ದಾರೆ.

ಯೋಜನೆ ಮುಂದುವರಿಯಲಿವೆ: ಕರಾವಳಿಯ ಪ್ರವಾಸಿ ಸ್ಥಳಗಳಲ್ಲಿ ಬೋಟ್ ಹೌಸ್, ತೇಲುವ ಉಪಾಹಾರ ಗೃಹ, ಸುಮಾರು ₹85 ಕೋಟಿ ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ, ಪಶ್ಚಿಮ ವಾಹಿನಿ ಯೋಜನೆಯಲ್ಲಿ ನೇತ್ರಾವತಿ ನದಿಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಮಂಗಳೂರು ತಾಲ್ಲೂಕಿನ ಹರೇಕಳ ಮತ್ತು ಅಡ್ಯಾರು ಮಧ್ಯೆ ಸುಮಾರು ₹174 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಘೋಷಿಸಲಾಗಿತ್ತು. ಈ ಯೋಜನೆಗಳು ಯಥಾರೂಪದಲ್ಲಿಯೇ ಮುಂದುವರಿಯಲಿವೆ ಎಂದು ಸಚಿವ ಯು.ಟಿ.ಖಾದರ್‌ ಸಮರ್ಥಿಸಿಕೊಂಡಿದ್ದಾರೆ.

ಕರಾವಳಿ ಪ್ರದೇಶದಲ್ಲಿ ಯಾವುದೇ ಯೋಜನೆಗಳಿಲ್ಲ ಎಂಬ ಬಿಜೆಪಿಯ ಟೀಕೆ ಅರ್ಥಹೀನ. ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನ ಎಲ್ಲ ಯೋಜನೆಗಳು ಮುಂದುವರಿಯಲಿವೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ವಕ್ತಾರ ಸುಶೀಲ್‌ ನೊರೋನ್ಹ ಪ್ರತಿಕ್ರಿಯಿಸಿದ್ದಾರೆ.

‘ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸೌಲಭ್ಯಗಳಿಗೆ ಒತ್ತು ನೀಡಲಾಗಿತ್ತು. ಆ ಎಲ್ಲ ಯೋಜನೆಗಳೂ ಮುಂದುವರಿಯಲಿವೆ.’

– ಯು.ಟಿ. ಖಾದರ್‌ವಸತಿ ಮತ್ತು ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.