ADVERTISEMENT

ಅಂಗವಿಕಲರೂ ಸಹಜ ಜೀವನ ನಡೆಸಬಲ್ಲರು

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:13 IST
Last Updated 23 ಮೇ 2017, 6:13 IST

ಚನ್ನಗಿರಿ: ಅಂಗವಿಕಲತೆ ಶಾಪವಲ್ಲ. ಆ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಸೋಮವಾರ ನಡೆದ ಅಂಗವಿಕಲರ ಅರಿವಿನ ಸಿಂಚನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳು ಸಾಕಷ್ಟಿವೆ. ಆದರೆ ಮಾಹಿತಿ ಕೊರತೆಯಿಂದ ಅರ್ಹ ಅಂಗವಿಕಲರಿಗೆ ಲಭ್ಯವಾಗುತ್ತಿಲ್ಲ ಎಂದು  ವಿಷಾದಿಸಿದರು.

ರೈಲ್ವೆ ಪಾಸ್, ಸಾಧನ ಸಲಕರಣೆಗಳ ವಿತರಣೆ, ಸಹಾಯಧನ, ಉದ್ಯೋಗದಲ್ಲಿ ಮೀಸಲಾತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿವೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಅಂಗವಿಕಲರಿಗೆ ಮನವರಿಕೆ ಮಾಡಿಕೊಡುವ ಅಗತ್ಯ ಬಹಳಷ್ಟಿದೆ ಎಂದರು.

ADVERTISEMENT

‘ಅಂಗವಿಕಲರು ಇಂದು ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಅದೇ ರೀತಿ ನಾವು ಯಾರಿಗೆ ಏನೂ ಕಡಿಮೆ ಎನ್ನುವಂತೆ ಬಾಳಿ ತೋರಿಸುವ ಕಾರ್ಯ ಮುಖ್ಯವಾಗಿ ಆಗಬೇಕಾಗಿದೆ. ಅಂಗವಿಕಲರಿಗೆ ಪ್ರೀತಿ, ವಿಶ್ವಾಸ ತೋರಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡಬೇಕು’ ಎಂದು ಕರೆ ನೀಡಿದರು.

ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಯೋಗೇಶ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂಗಣ್ಣ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.