ADVERTISEMENT

ಅಪರಾಧ ತಡೆಗೆ ನಾಗರಿಕರ ಸಹಭಾಗಿತ್ವ ಮುಖ್ಯ

ಮಾಸಾಚರಣೆಯಲ್ಲಿ ಎಸ್‌ಪಿ ಭೀಮಾಶಂಕರ ಎಸ್‌.ಗುಳೇದ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:39 IST
Last Updated 12 ಜನವರಿ 2017, 11:39 IST
ದಾವಣಗೆರೆ: ಸಮಾಜದಲ್ಲಿ ಅಪರಾಧ ಕೃತ್ಯಗಳನ್ನು ತಡೆಯುವ ಹೊಣೆಗಾರಿಕೆ ಪೊಲೀಸ್ ಇಲಾಖೆ ಮೇಲೆ ಮಾತ್ರವಲ್ಲ, ಸಾರ್ವಜನಿಕರ ಮೇಲೂ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ಅಭಿಪ್ರಾಯಪಟ್ಟರು.
 
ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾಗರಿಕರ ಸಹಭಾಗಿತ್ವ ಅತಿ ಮುಖ್ಯ. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳು ನಡೆದರೆ ನಾಗರಿಕರು ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಪೊಲೀಸರ ಗಮನಕ್ಕೆ ತರಬೇಕು’ ಎಂದು ಕಿವಿಮಾತು ಹೇಳಿದರು.
 
ಈಚೆಗೆ ನಗರದಲ್ಲಿ ಸರಗಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು, ಸರಗಳ್ಳರನ್ನು ಬಂಧಿಸಲು ಪೊಲೀಸ್ ಇಲಾಖೆ ಜಾಲ ಬೀಸಿದೆ. ಮಹಿಳೆಯರು ಬಹಿರಂಗವಾಗಿ ಆಭರಣ ಪ್ರದರ್ಶಿಸಿ ಒಂಟಿಯಾಗಿ ಓಡಾಡಬಾರದು. ಪ್ರತಿ ಬಡಾವಣೆಯ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಪ್ರಸ್ತಾವವಿದ್ದು, ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
 
‘ನೋಟು ಅಮಾನ್ಯಗೊಂಡ ಬಳಿಕ ನಗದುರಹಿತ ವಹಿವಾಟು ಹೆಚ್ಚಾಗಿದೆ. ಅಂತೆಯೇ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಆನ್‌ಲೈನ್‌ ವಂಚನೆ ಬಗ್ಗೆ ಜನಜಾಗೃತಿ ಅಗತ್ಯವಾಗಿದ್ದು, ಗ್ರಾಹಕರು ಬ್ಯಾಂಕ್‌ ಖಾತೆಯ ವಿವರ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಪಿನ್‌ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.
 
‘ಗ್ರಾಹಕರ ಬ್ಯಾಂಕ್‌ ಖಾತೆಯ ವಿವರಗಳನ್ನು ಯಾವ ಬ್ಯಾಂಕ್‌ ಅಧಿಕಾರಿಯೂ ಕೇಳುವುದಿಲ್ಲ. ಎಟಿಎಂ ಕಾರ್ಡ್‌ ಕಳೆದು ಹೋದರೆ ಬ್ಲಾಕ್ ಆದರೆ ನೇರವಾಗಿ ಬ್ಯಾಂಕ್‌ಗೆ ಹೋಗಿ ದೂರು ನೀಡಿ. ಬಹುಮಾನ, ಆಮಿಷಗಳಿಗೆ ಬಲಿಯಾಗಿ ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳಬೇಡಿ. ಬ್ಯಾಂಕ್ ಖಾತೆಯ ಜತೆ ಕಡ್ಡಾಯವಾಗಿ ಮೊಬೈಲ್‌ ನಂಬರ್ ಲಿಂಕ್‌ ಮಾಡಿಸಿ’ ಎಂದರು.
 
‘ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಯುವತಿಯರು ಎಚ್ಚರ ವಹಿಸಬೇಕು. ಫ್ರೆಂಡ್ ರಿಕ್ವೆಸ್ಟ್‌ ಕಳುಹಿಸಿದವರು ಪರಿಚಯವಿಲ್ಲದಿದ್ದರೆ, ಸ್ನೇಹದ ಕೋರಿಕೆಯನ್ನು ನಿರಾಕರಿಸಬೇಕು. ಪೂರ್ವಾಪರ ಗೊತ್ತಿಲ್ಲದ ಯುವಕರ ಜತೆ ಚಾಟ್‌ ಮಾಡುವುದು ಸರಿಯಲ್ಲ. ವೈಯಕ್ತಿಕ ಫೋಟೊಗಳು, ವಿವರಗಳನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಬೇಡಿ ಎಂದರು.
 
ಹೆಚ್ಚವರಿ ಜಿಲ್ಲಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ‘ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರ ನಡವಳಿಕೆ ಗಂಭೀರವಾಗಿರಬೇಕು. ಲೈಂಗಿಕ ಕಿರುಕುಳ, ಚುಡಾಯಿಸುವುದು ಕಂಡುಬಂದರೆ ಕೂಡಲೇ ಪೊಲೀಸರಿಗೆ ದೂರು ನೀಡಬೇಕು ಎಂದರು.
 
ಡಿವೈಎಸ್‌ಪಿ ಅಶೋಕ್‌ ಕುಮಾರ್, ಸಿಪಿಐ ಸಂಗನಾಥ್‌, ಕಾಲೇಜು ಪ್ರಾಂಶುಪಾಲ, ಶಿವಪ್ರಕಾಶ್‌, ವಕೀಲ ಮುರುಗೇಶ್‌ ಸೇರಿದಂತೆ ಹಲವರು ಹಾಜರಿದ್ದರು.
 
**
ಎಎಸ್‌ಪಿ ಟಿಪ್ಸ್‌...
* ಸಭ್ಯ ನಡವಳಿಕೆಯಿಂದ ಅಪರಾಧ ಕೃತ್ಯಗಳು ಇಳಿಮುಖ
* ಸ್ವರಕ್ಷಣೆಗೆ, ಕರಾಟೆ ಕಲೆಯ ಕಲಿಕೆ ಅಗತ್ಯ
* ಆಟೊ, ಕ್ಯಾಬ್‌ನಲ್ಲಿ ತೆರಳುವಾಗ ಚಾಲಕನ ವಿವರ ಬರೆದಿಟ್ಟುಕೊಳ್ಳಿ
* ಪ್ರಯಾಣ ಸಂದರ್ಭ ಪೆಪ್ಪರ್‌ ಸ್ಪ್ರೇ ಜತೆಗೆ ಇಟ್ಟುಕೊಳ್ಳಿ
* ಸಮಸ್ಯೆ ಎದುರಾದಾಗ ಧೈರ್ಯವಾಗಿ ದೂರು ನೀಡಿ
* ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರ ಅಗತ್ಯ
 
***
ಮೆಟ್ರೋ ನಗರಗಳಿಗೆ ಹೋಲಿಸಿದರೆ ದಾವಣಗೆರೆ ಹೆಚ್ಚು ಸುರಕ್ಷಿತ. ಆಟೊ ಹತ್ತುವಾಗ, ವಾಹನದ ನೋಂದಣಿ ಸಂಖ್ಯೆ ಬರೆದಿಟ್ಟುಕೊಳ್ಳುವುದು ಅವಶ್ಯ. ವಿದ್ಯಾರ್ಥಿನಿಯರು ಸ್ವರಕ್ಷಣೆ ಕಲೆ ಕಲಿಯಲು ಇಚ್ಛಿಸಿದರೆ ಪೊಲೀಸ್ ಇಲಾಖೆ ತರಬೇತಿ ನೀಡಲು ಸಿದ್ಧವಿದೆ.
–ಡಾ.ಭೀಮಾಶಂಕರ ಎಸ್.ಗುಳೇದ್, ಎಸ್‌ಪಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.