ADVERTISEMENT

ಒಣಗಿದ ಬೆಳೆ: ಮೋಡ ಬಿತ್ತನೆ ನಿರೀಕ್ಷೆಯಲ್ಲಿ ರೈತರು

ಸಂತೇಬೆನ್ನೂರು: ಮಳೆ ಕೊರತೆಯಿಂದ ಮೆಕ್ಕೆಜೋಳ ಬೆಳೆ ಒಣಗುವ ಭೀತಿ

ಕೆ.ಎಸ್.ವೀರೇಶ್ ಪ್ರಸಾದ್
Published 11 ಜುಲೈ 2017, 6:16 IST
Last Updated 11 ಜುಲೈ 2017, 6:16 IST

ಸಂತೇಬೆನ್ನೂರು:  ಸತತ ಬರದಿಂದ ಬಳಲಿದ್ದ ರೈತರು ಮುಂಗಾರು ಮಳೆ ಮೇಲಿಟ್ಟಿದ್ದ ಭರವಸೆ ಮತ್ತೊಮ್ಮೆ ಹುಸಿ ಯಾಗುತ್ತಿದೆ. ಮೋಡಗಳು ಗಾಳಿಯೊಂದಿಗೆ ತೇಲಾಡುತ್ತಿರುವುದನ್ನು ನೋಡುವ ರೈತರಿಗೆ ಮಳೆಯ ಸಿಂಚನವಷ್ಟೇ ನೋಡುವ ಭಾಗ್ಯ. ಭೂಮಿಯಲ್ಲಿ ಉತ್ತು, ಬಿತ್ತಿದ ಬೆಳೆಗಳು ಒಣಗುವ ಸ್ಥಿತಿಗೆ ತಲುಪಿರುವುದು ಮತ್ತೊಮ್ಮೆ ಬರಗಾಲಕ್ಕೆ ಮುನ್ನುಡಿ ಬರೆದಂತಿದೆ.

ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ನಡೆಸಿದೆ. ಇದನ್ನು ಶೀಘ್ರವೇ ಕಾರ್ಯರೂಪಕ್ಕೆ ತರಬೇಕು. ನೀರಿಲ್ಲದೆ ಹತಾಶಗೊಂಡ ಜೀವಗಳಿಗೆ ಮರು ಜೀವ ನೀಡುವ ಮೂಲಕ ಆಶಾಕಿರಣ ಮೂಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹೋಬಳಿಯಲ್ಲಿ 11,200 ಹೆಕ್ಟೇರ್‌ ಖುಷ್ಕಿ ಭೂಮಿ ಇದೆ. ಇದುವರೆಗೆ ಕೇವಲ 2,300 ಹೆಕ್ಟೇರ್‌ (ಶೇ 21) ಬಿತ್ತನೆಯಾಗಿದೆ. ಜೂನ್‌ ತಿಂಗಳಲ್ಲಿ ತಾಲ್ಲೂಕಿನಲ್ಲಿ 206 ಮಿ.ಮೀ ವಾಡಿಕೆ ಮಳೆಯಾಗಬೇಕಾಗಿತ್ತು. ಕೇವಲ 141 ಮಿ.ಮೀ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಕೇಶವ್ ಮಾಹಿತಿ ನೀಡಿದರು.

ADVERTISEMENT

ಬಿತ್ತಿದ ಮೆಕ್ಕೆಜೋಳ ಬೇರು ಹಸಿ ಮಳೆಯಿಂದ ಉಳಿದಿದೆ. ಮಳೆ ಬರಬಹುದೆಂಬ ಆಶಾಕಿರಣವೂ ಬತ್ತುತ್ತಿದೆ. ಅಡಿಕೆ ಬೆಳೆಗಾರರು ನೀರು ಸಿಗದೆ ಕೈಚೆಲ್ಲಿದ್ದಾರೆ. ಉತ್ತಮವಾಗಿ ಮಳೆ ಸುರಿಯದಿರುವುದರಿಂದ ಅಂತರ್ಜಲ ಮಟ್ಟವೂ ಆತಂಕದ ಸ್ಥಿತಿಯಲ್ಲಿದೆ. ಮಲೆನಾಡಿನಲ್ಲಿ ಒಂದಿಷ್ಟು ಮಳೆಯಾಗುತ್ತಿದೆ. ಅರೆ ಮಲೆನಾಡು ಪ್ರದೇಶದಲ್ಲಿ ಮಳೆ ಬರುತ್ತಿಲ್ಲ ಎನ್ನುತ್ತಾರೆ ರೈತ ಪ್ರಕಾಶ್.

‘ಮಳೆ ಕೊರತೆಯಿಂದ ತೆಂಗು, ಮಾವಿನ ಫಸಲು ಬರುವ ಬಗ್ಗೆ ಆತಂಕ ಮೂಡಿದೆ. ಮುಂದಿನ ವರ್ಷ ದೇವರಿಗೆ ಒಡೆಯಲೂ ತೆಂಗಿನಕಾಯಿ ಸಿಗುತ್ತೋ.. ಇಲ್ಲವೋ’ ಎಂಬುದು ದೊಡ್ಡಬ್ಬಿಗೆರೆಯ ಹಿರಿಯಜ್ಜನ ಹತಾಶ ನುಡಿ.

ಕುಡಿಯುವ ನೀರಿನ ಸೆಲೆ ಒಣಗಿವೆ. ಖಾಸಗಿ ವ್ಯಕ್ತಿಗಳ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಒಂದಿಷ್ಟು ಮಳೆಯಾಗಿ, ನೀರು ತುಂಬಿದರೆ ಪರಿಸ್ಥಿತಿ ಬದಲಾಗುತ್ತಿತ್ತು. ಕುಡಿಯುವ ನೀರಿಗೂ ಸಂಚಕಾರ ತಂದಿದೆ ಎಂದು ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

‘ತೇಲಿ ಹೋಗುವ ಮೋಡಗಳು ಮಳೆ ಸುರಿಸುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಕೆಲ ನಿಮಿಷ ಬೀಳುವ ಮಳೆ ನೀರಿನ ಬವಣೆ ನೀಗಿಸಿಲ್ಲ. ಸರ್ಕಾರದ ಶೀಘ್ರವೇ ಟೆಂಡರ್‌ ಕರೆದು ಮೋಡ ಬಿತ್ತನೆ ಯೋಜನೆಗೆ ಚಾಲನೆ ನೀಡಲಿ’ ಎಂದು ಜಿ.ಎಸ್.ಶಿವರಾಜ್ ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.