ADVERTISEMENT

ಕರುಗಲ್ಲಿಗೆ 101 ಕುಂಭಾಭಿಷೇಕ ಪೂಜೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:08 IST
Last Updated 17 ಮೇ 2017, 5:08 IST

ದಾವಣಗೆರೆ: ಸಕಾಲಕ್ಕೆ ಮಳೆ ಬರಲಿ ಎಂದು ದಾವಣಗೆರೆ ಜಿಲ್ಲಾ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ಮಾರಾಟಗಾರರ ಸಂಘದ ಸದಸ್ಯರು ಮಂಗಳವಾರ ದುರ್ಗಾಂಬಿಕಾ ದೇವಿಯ ಕರುಗಲ್ಲಿಗೆ (ಹಗೆದಿಬ್ಬ ವೃತ್ತದ ಬಳಿ) 101 ಕುಂಭಾಭಿಷೇಕ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಬೆಳಿಗ್ಗೆ 8ರಿಂದಲೇ ದುರ್ಗಾಂಬಿಕಾ ದೇವಿಗೆ ಎಡೆಜಾತ್ರೆ ಪೂಜಾ ಕಾರ್ಯಕ್ರಮಗಳು ನಡೆದವು. ಮಡಿ ಬಟ್ಟೆಯನ್ನು ಧರಿಸಿ ಭಕ್ತರು ದೇವಿಗೆ ಎಡೆಪೂಜೆ ಸಲ್ಲಿಸಿದರು.
‘ಸಕಾಲಕ್ಕೆ ಮಳೆ ಬಾರದೇ ಇದ್ದಾಗ ದೇವಿಗೆ ಎಡೆಜಾತ್ರೆ ಹಾಗೂ ಕರುಗಲ್ಲಿಗೆ ಕುಂಭಾಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ.

ಇದರಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿತ್ತು. ಅಂತೆಯೇ ಈ ಬಾರಿಯೂ ನಮ್ಮ ಸಂಘದಿಂದ ಹಗೆದಿಬ್ಬ ವೃತ್ತದ ಬಳಿ ಇರುವ ದೇವಿಯ ಕರುಗಲ್ಲಿಗೆ  ಕುಂಭಾಭಿಷೇಕ ಪೂಜೆ ಸಲ್ಲಿಸಲಾಯಿತು’ ಎಂದು ಜಿಲ್ಲಾ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್‌ ಲೋಕಿಕೆರೆ ತಿಳಿಸಿದರು.

ADVERTISEMENT

ಅವಿವಾಹಿತ ಐವರು ಯುವಕರು ದೇವಿಯ ಕರುಗಲ್ಲಿಗೆ ತೀರ್ಥಾಭಿಷೇಕ ಮಾಡುವ ಮೂಲಕ 101 ಕೊಡಗಳಿಂದ ನೀರು ಸುರಿದು, ಪೂಜೆ ಸಲ್ಲಿಸಿದರು ಎಂದು ಅವರು ಹೇಳಿದರು. ಇದೇ ಸಮಯದಲ್ಲಿ  ಎಸ್ಎಸ್‌ಎಂ ಅಭಿಮಾನಿಗಳ ಬಳಗದ ಸದಸ್ಯರು ಹಗೆದಿಬ್ಬ ವೃತ್ತದಿಂದ ದೇಗುಲದವರಿಗೆ ಉರುಳು ಸೇವೆ ಮಾಡಿದರು.

ಪೂಜಾ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ, ಸಂಘದ ಶಾಂತರಾಜ್‌, ಧನಂಜಯ ಕಡ್ಲೆಬಾಳು, ಬಸವರಾಜ್‌, ಸಂಕಣ್ಣ, ಜಗದೀಶ್‌, ರವಿ ಅತ್ತಿಗೆರೆ, ಅವರೂ ಇದ್ದರು.

ದೊಡ್ಡೇರಿಕಟ್ಟೆ: ಮಳೆಗಾಗಿ ಕತ್ತೆಗಳ ಮದುವೆ

ಚನ್ನಗಿರಿ: ತಾಲ್ಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಸೋಮವಾರ ಕತ್ತೆಗಳ ಮದುವೆ ನೆರವೇರಿಸಿದರು. ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಒಂದು ವಾರದಿಂದ ಮುಂಗಾರು ಪೂರ್ವ ಮಳೆ ಬೀಳುತ್ತಿದೆ. 

ಸುತ್ತಮುತ್ತಲಿನಕೆಲವು ಗ್ರಾಮಗಳಲ್ಲಿ ರೈತರು ಹತ್ತಿ, ಎಳ್ಳು, ಹೆಸರು ಹಾಗೂ ಉದ್ದಿನ ಬೆಳೆಯ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆಗೆ ಉಳುಮೆ ಕೂಡ ಮಾಡುತ್ತಿದ್ದಾರೆ. ಆದರೆ, ದೊಡ್ಡೇರಿಕಟ್ಟೆ ಸುತ್ತಮುತ್ತ ಈವರೆಗೂ ಮಳೆಯಾಗಿಲ್ಲ. ಇದು ರೈತರ ಚಿಂತೆಗೆ ಕಾರಣವಾಗಿದೆ.

ಕಾಕನೂರು, ಸಂತೇಬೆನ್ನೂರು, ಅರಳಿಕಟ್ಟೆ, ಕೊಂಡದಹಳ್ಳಿ, ದೊಡ್ಡಬ್ಬಿಗೆರೆ, ಕುಳೇನೂರು, ಶಿವಕುಳೇನೂರು ಗ್ರಾಮಗಳಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬುದು ಗ್ರಾಮೀಣರ ನಂಬಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.