ADVERTISEMENT

ಕುಂದುವಾಡ ಕೆರೆ ನೀರಿನ ಸಾಮರ್ಥ್ಯ ಹೆಚ್ಚಳ

ಕೆರೆಯ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಶಾಸಕ ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:43 IST
Last Updated 25 ಏಪ್ರಿಲ್ 2014, 6:43 IST

ದಾವಣಗೆರೆ: ಕುಂದುವಾಡ ಕೆರೆ ಹೂಳೆತ್ತುವ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ ಎಂದು ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ್‌ ತಿಳಿಸಿದರು.

ಕುಂದುವಾಡ ಕೆರೆ ಹೂಳೆತ್ತುವ ಕಾಮಗಾರಿ ಹಾಗೂ ಬಾಪೂಜಿ ಡೆಂಟಲ್‌ ಕಾಲೇಜು ಸಿಮೆಂಟ್‌ ರಸ್ತೆ ಕಾಮಗಾರಿ ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಕೆರೆಗಳ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ. ಕುಂದುವಾಡ ಕೆರೆ ಹೂಳೆತ್ತಲು ಇದುವರೆಗೆ ₨ 1.5 ಕೋಟಿ ವೆಚ್ಚ ಮಾಡಲಾಗಿದ್ದು, ಇನ್ನೂ ₨ 1 ಕೋಟಿಯ ಆವಶ್ಯಕತೆ ಇದೆ.

ಇದುವರೆಗೆ 1 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳು ಎತ್ತಲಾಗಿದ್ದು, ಇನ್ನೂ 65 ಸಾವಿರ ಕ್ಯೂಬಿಕ್‌ ಮೀಟರ್‌ ಹೂಳು ಬಾಕಿ ಇದೆ. ಭೂಸೇನಾ ನಿಗಮ ಈ ಕಾಮಗಾರಿ ನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಅನುದಾನದಲ್ಲಿ ₨ 21.60 ಲಕ್ಷ, 13ನೇ ಹಣಕಾಸಿನ ಯೋಜನೆಯಲ್ಲಿ 78.61 ಲಕ್ಷ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕುಂದುವಾಡ ಕೆರೆ ದಂಡೆಯ ಮೇಲೆ ಗಾಜಿನ ಮನೆ, ಶಿವನ ಪ್ರತಿಮೆ ನಿರ್ಮಿಸಲಾಗುತ್ತದೆ. ಸುಸಜ್ಜಿತ ವಾಕ್‌ಪಾತ್,  ಪಾರ್ಕ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರದ ಗುಂಡಿ ವೃತ್ತದಿಂದ ಲಲಿತ ಕಲಾ ವಿದ್ಯಾಲಯದವರೆಗೆ ₨ 1.52 ಕೋಟಿ ವೆಚ್ಚದಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸಲಾಗುತ್ತಿದೆ, ಪಾದಚಾರಿ ಮಾರ್ಗ, ವಾಹನ ನಿಲುಗಡೆಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಎಂಜಿನಿಯರ್ ರುದ್ರಪ್ಪ, ಉಮೇಶ್‌ ಪಾಟೀಲ್, ಪಾಲಿಕೆ ಸದಸ್ಯರಾದ ತಿಪ್ಪಣ್ಣ, ಸುರೇಶ್, ಗುತ್ತಿಗೆದಾರ ಉಮೇಶ್, ವಿಜಯಕುಮಾರ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಗದೀಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.