ADVERTISEMENT

‘ಕೃಷಿ ವಿಜ್ಞಾನ ಪಠ್ಯ ವಸ್ತುವಾಗಲಿ’

ಕೃಷಿ ವಿಜ್ಞಾನ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:42 IST
Last Updated 14 ಮಾರ್ಚ್ 2017, 5:42 IST

ಬಸವಾಪಟ್ಟಣ: ‘ಮಕ್ಕಳಿಗೆ ಬಾಲ್ಯ ದಲ್ಲಿಯೇ ಕೃಷಿ ವಿಜ್ಞಾನದ ಪರಿಚಯ ಅಗತ್ಯ’ ಎಂದು ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಪರಶುರಾಮ ಚಂದ್ರವಂಶಿ ಹೇಳಿದರು.

ಅವರು ತುರ್ಚುಗಟ್ಟದ ಶ್ರೀ ಗುರುಕುಲ ವಿದ್ಯಾಪೀಠದಲ್ಲಿ ಈಚೆಗೆ ಏರ್ಪಡಿಸಿದ್ದ ಕೃಷಿ ವಿಜ್ಞಾನ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಮಾನವ ಜನಾಂಗಕ್ಕೆ ಅಗತ್ಯವಾದ ಆಹಾರ ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳನ್ನು ಒದಗಿಸುವ ಕೃಷಿಯ ಬಗ್ಗೆ ಬಾಲ್ಯದಿಂದಲೇ ಒಲವು ಅಗತ್ಯ. ಪಠ್ಯ ವಿಷಯದಲ್ಲಿ ಕೃಷಿ ಚಟುವಟಕೆಯ ಸಂಪೂರ್ಣ ಪರಿಚಯ ಮಾಡಿಸಿದರೆ ಮುಂದೆ ಸಂಶೋಧನೆ ಕೈಗೊಳ್ಳಲು ಸಹ ಕಾರಿಯಾಗುತ್ತದೆ’ ಎಂದು ಅವರು ಹೇಳಿದರು.

ಕತ್ತಲಗೆರೆ ಕೃಷಿ ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ.ಆನಂದಕುಮಾರ್‌ ಮಾತನಾಡಿ, ‘ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಬೆಳೆಯಬಹುದಾದ ಫಸಲುಗಳ ಬಗ್ಗೆ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಯ ಕುರಿತು ಮಕ್ಕಳ ಗಮನಕ್ಕೆ ತರುವಲ್ಲಿ ಶಿಕ್ಷಣ ಇಲಾಖೆ ಮಹತ್ತರ ಪಾತ್ರ ವಹಿಸಬೇಕಿದೆ’ ಎಂದರು.

ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಿ.ಮಲ್ಲೇಶಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದ ಮಕ್ಕಳು ನಿತ್ಯ ತಮ್ಮ ಮನೆ ಹಾಗೂ ಪರಿಸರದಲ್ಲಿ ನಡೆಯುವ ಕೃಷಿ ಕಾರ್ಯದ ಬಗ್ಗೆ ಅರಿವು ಹೊಂದಿರುತ್ತಾರೆ. ಕೆಲವು ಮಕ್ಕಳು ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸಗಳಲ್ಲಿಯೂ ಭಾಗವಹಿಸುತ್ತಾರೆ. ಅವರಿಗೆ ಶಿಕ್ಷಣದ ಮೂಲಕ ಇನ್ನೂ ಹೆಚ್ಚಿನ ವಿಷಯಗಳ ಮಾಹಿತಿ ಅಗತ್ಯವಾಗಿದೆ’ ಎಂದರು.

ಕೃಷಿ ವಿಜ್ಞಾನಿ ಡಾ.ರಾಮಪ್ಪ ಪಾಟೀಲ್‌ ಮಾತನಾಡಿ, ‘ಗುರುಕುಲ ವಿದ್ಯಾಪೀಠದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ’ ಎಂದು ಅವರು ಹೇಳಿದರು.

ಶಾಲಾ ಮಕ್ಕಳು ತಾವೇ ತಯಾರಿಸಿದ ವಿವಿಧ ರೀತಿಯ ಕೃಷಿ ಉಪಕರಣಗಳ ಮಾದರಿಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಭವ್ಯ ಮೇಘರಾಜ್‌ ಅಧ್ಯಕ್ಷತೆ ವಹಿಸಿದ್ದರು. ಪೋಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.