ADVERTISEMENT

ಚನ್ನಗಿರಿ: ಮೆಣಸಿನಕಾಯಿ ಕೃಷಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:15 IST
Last Updated 11 ಜುಲೈ 2017, 6:15 IST

ಚನ್ನಗಿರಿ:  ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದ ದೇವರಹಳ್ಳಿ ಗ್ರಾಮದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಮೆಣಸಿನಕಾಯಿ
ಕೃಷಿಗೆ ಭಾರಿ ಹಿನ್ನಡೆಯಾಗಿದೆ.  ನೀರಾವರಿ ಸೌಕರ್ಯ ಹೊಂದಿದ ರೈತರು ಮಾತ್ರ ಈ ಕೃಷಿಯಲ್ಲಿ ತೊಡಗಿದ್ದಾರೆ.

ದೇವರಹಳ್ಳಿ ಗ್ರಾಮ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತರಕಾರಿ ಹಾಗೂ ಹಸಿಮೆಣಸಿನಕಾಯಿಯನ್ನು ಬೆಳೆಯುವ ಗ್ರಾಮವೆಂದು ಹೆಗ್ಗಳಿಕೆ ಪಡೆದು ಕೊಂಡಿದೆ. ಪ್ರತಿ ವರ್ಷ ಈ ಗ್ರಾವೊಂದರಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಹಸಿಮೆಣಸಿನಕಾಯಿ ಬೆಳೆಯಲಾಗುತ್ತದೆ.  ಆದರೆ,  ಈ ಬಾರಿ  ಮಳೆ ಕೊರತೆಯಿಂದಾಗಿ ಇದುವರೆಗೆ ಕೇವಲ 500 ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗಿದೆ. ನೀರಾವರಿ ಸೌಕರ್ಯ ಇರುವ ರೈತರು ನೀರು ಹಾಯಿಸಿ ಮೆಣಸಿನ ಕಾಯಿ ಸಸಿಗಳ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

‘ಪ್ರತಿ ವರ್ಷ ಈ ವೇಳೆಗಾಗಲೇ ಹಸಿಮೆಣಸಿನ ಕಾಯಿಯನ್ನು ಕಿತ್ತು ಮಾರಾಟ ಮಾಡುತ್ತಿದ್ದೆವು.  ಆದರೆ, ಈ ವರ್ಷ ಜುಲೈ ಎರಡನೇ ವಾರವಾದರೂ   ಮುಂಗಾರು ಮಳೆ ಪ್ರಾರಂಭವಾಗಿಲ್ಲ.

ADVERTISEMENT

ಮತ್ತೆ ಈ ಬಾರಿ ಬರಗಾಲ ಬಂದರೇನು ಗತಿ ಎಂಬ ಚಿಂತೆ ಆರಂಭವಾಗಿದೆ’ ಎನ್ನುತ್ತಾರೆ ದೇವರಹಳ್ಳಿ ಗ್ರಾಮದ ರೈತರಾದ ಶಿವಣ್ಣ, ಪರಶುರಾಮ.
ತಾಲ್ಲೂಕಿನ ನಾಗೇನಹಳ್ಳಿ, ನಲ್ಲೂರು, ಅಸ್ತಾಪನಹಳ್ಳಿ, ಗುಳ್ಳೇಹಳ್ಳಿ, ರಾಮೇನಹಳ್ಳಿ, ನೀತಿಗೆರೆ, ನುಗ್ಗಿಹಳ್ಳಿ, ಅರಳಿಕಟ್ಟೆ, ಹೊನ್ನೇಮರದಹಳ್ಳಿ, ಹಿರೇಉಡ, ಹಿರೇಉಡ ತಾಂಡಾ  ಗ್ರಾಮಗಳಲ್ಲಿ ಹಸಿಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು.

ಇಲ್ಲಿ ಬೆಳೆದ ಹಸಿಮೆಣಸಿನಕಾಯಿಗೆ ದೇವರಹಳ್ಳಿ ಗ್ರಾಮವೇ ಪ್ರಮುಖ ಮಾರುಕಟ್ಟೆಯಾಗಿತ್ತು.  ವರ್ತಕರು ಈ ಗ್ರಾಮಕ್ಕೆ ಬಂದು ಹಸಿ ಮೆಣಸು ಖರೀದಿಸುತ್ತಿದ್ದರು.  ಮಳೆಯ ಕೊರತೆ ಯಿಂದಾಗಿ ಮೆಣಸಿನಕಾಯಿ ಕೃಷಿಗೆ ಈ ಬಾರಿ ಹಿನ್ನಡೆಯಾಗಿದೆ. ಇನ್ನು ಕೆಲವು ರೈತರು ಈ ಕೃಷಿಯಲ್ಲಿ ತೊಡಗಲು ಮಳೆಯನ್ನು ಕಾಯುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು.

ಎಚ್.ಟಿ. ನಟರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.