ADVERTISEMENT

‘ದೇವನಗರಿ’ಗೆ ಬಂದ ‘ಮಾಸ್ತಿಗುಡಿ’ ಚಿತ್ರ ತಂಡ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:03 IST
Last Updated 20 ಮೇ 2017, 5:03 IST
ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ಶುಕ್ರವಾರ ಭೇಟಿ ನೀಡಿದ ‘ಮಾಸ್ತಿಗುಡಿ’ ಚಿತ್ರದ ನಾಯಕ ದುನಿಯಾ ವಿಜಿ ಅಭಿಮಾನಿಗಳಿಗೆ ಕೈ ಬೀಸಿದರು
ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ಶುಕ್ರವಾರ ಭೇಟಿ ನೀಡಿದ ‘ಮಾಸ್ತಿಗುಡಿ’ ಚಿತ್ರದ ನಾಯಕ ದುನಿಯಾ ವಿಜಿ ಅಭಿಮಾನಿಗಳಿಗೆ ಕೈ ಬೀಸಿದರು   

ದಾವಣಗೆರೆ: ‘ಮಾಸ್ತಿಗುಡಿ’ ಚಿತ್ರ ತಂಡ ಶುಕ್ರವಾರ ಚಿತ್ರ ಪ್ರದರ್ಶನವಾಗುತ್ತಿರುವ ನಗರದ ಅಶೋಕ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿತು.
ಇದಕ್ಕೂ ಮೊದಲು ಜಿಲ್ಲಾ ವರದಿಗಾರರ ಕೂಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ದುನಿಯಾ ವಿಜಿ, ‘ದಾವಣಗೆರೆ ಸಿನಿಪ್ರೇಮಿಗಳ ಆಸ್ಥಾನ. ಇಲ್ಲಿ ಕನ್ನಡ ಚಿತ್ರಗಳನ್ನು ಜನ ಅಪಾರವಾಗಿ ಪ್ರೀತಿಸುತ್ತಾರೆ. ಇಲ್ಲಿಯ ಜನರ ಪ್ರೀತಿ, ವಿಶ್ವಾಸಕ್ಕೆ ನಾವು ಸದಾ ಋಣಿ’ ಎಂದು ಕೈಮುಗಿದರು.

‘ಮಾಸ್ತಿಗುಡಿ ಬಹಳ ಶ್ರಮ ವಹಿಸಿ ಮಾಡಿದ ಚಿತ್ರ. ಇಂತಹ ಚಿತ್ರಗಳನ್ನು ಜನರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಇದೇ ಚಿತ್ರದ ಚಿತ್ರೀಕರಣದ ವೇಳೆ ಸಾವು ಕಂಡ ಸಹನಟರಾದ ಉದಯ್, ಅನಿಲ್‌ ಕುರಿತು ಮಾತನಾಡಿದ ಅವರು, ‘ಇದರಲ್ಲಿ ಯಾರ ತಪ್ಪೂ ಇಲ್ಲ. ಎಲ್ಲವೂ ವಿಧಿಯ ಆಟ. ಅವರಿಬ್ಬರ ಸಾವು ಜೀವನ ಪರ್ಯಾಂತ ನಮ್ಮನ್ನು ಕಾಡುತ್ತೆ. ಹೋದ ಜೀವಗಳನ್ನು ಯಾರೂ ಮರಳಿ ತರಲು ಸಾಧ್ಯವಿಲ್ಲ’ ಎಂದು ನೋವು ವ್ಯಕ್ತಪಡಿಸಿದರು.

ADVERTISEMENT

‘ಈ ಚಿತ್ರದಿಂದ ಬಂದ ಲಾಭದಲ್ಲಿ ಈ ಇಬ್ಬರೂ ಕಲಾವಿದರ ಕುಟುಂಬಗಳಿಗೆ ನೆರವು ನೀಡುವ ಆಲೋಚನೆ ಚಿತ್ರ ತಂಡಕ್ಕೆ ಇದೆ’ ಎಂದು ವಿಜಯ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸದ್ಯಕ್ಕೆ ತೆಲುಗು ಚಿತ್ರರಂಗಕ್ಕೆ ಹೋಗುತ್ತಿಲ್ಲ. ‘ಕನಕ’ ಚಿತ್ರದಲ್ಲಿ ಬ್ಯುಸಿ ಇದ್ದೇನೆ’ ಎಂದರು.

ಉತ್ತಮ ಕಲೆಕ್ಷನ್: ‘ಚಿತ್ರದ ಬಗ್ಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ ಚಿತ್ರ ಬಿಡುಗಡೆಯಾದ ದಿನದಿಂದಲೂ ಉತ್ತಮ ಕಲೆಕ್ಷನ್‌ ಆಗುತ್ತಿದೆ. ಹಾಗಾಗಿ, ದಾವಣಗೆರೆಯಿಂದಲೇ ಮಾಸ್ತಿಗುಡಿ ವಿಜಯಯಾತ್ರೆ ಆರಂಭಿಸಲಾಗಿದೆ’ ಎಂದು ನಿರ್ದೇಶಕ ನಾಗಶೇಖರ್ ಹೇಳಿದರು.

‘ಚಿತ್ರ ಮಾಧ್ಯಂತರ ನಂತರ ನಿಧಾನಗತಿಯಲ್ಲಿ ಸಾಗುತ್ತದೆಂಬ ಅಭಿಪ್ರಾಯ ಚಿತ್ರ ವಿಮರ್ಶಕರಿಂದ ಕೇಳಿಬಂದಿತ್ತು. ಹಾಗಾಗಿ, ಚಿತ್ರದಲ್ಲಿ ಸಣ್ಣ ಬದಲಾವಣೆ ಮಾಡಿ ಈಗ ಪ್ರದರ್ಶಿಸಲಾಗುತ್ತಿದೆ. ಹಿಂದೆ ನೋಡಿದವರು ಮತ್ತೊಮ್ಮೆ ನೋಡಿ’ ಎಂದು ಅವರು ಮನವಿ ಮಾಡಿದರು.

‘ಪ್ರಕೃತಿಯ ಮಹತ್ವ ಸಾರುವ ಚಿತ್ರ ಇದು. ಹಾಗಾಗಿ, ಮಕ್ಕಳಿಗೆ ಟಿಕೆಟ್‌ ದರದಲ್ಲಿ ಶೇ 50 ರಿಯಾಯ್ತಿ ಘೋಷಿಸಲಾಗಿದೆ. ಹೆಚ್ಚಿನ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ನಟ ರಂಗಾಯಣ ರಘು ಮಾತನಾಡಿ, ‘ಕಾಡು–ಮನುಷ್ಯನ ಸಂಬಂಧವನ್ನು ಮಾಸ್ತಿಗುಡಿಯಲ್ಲಿ ಬಹಳ ಅರ್ಥಪೂರ್ಣವಾಗಿ ಚಿತ್ರಿಸ
ಲಾಗಿದೆ. ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಿಸಲಾಗಿದೆ’ ಎಂದರು.

‘ಬಾಹುಬಲಿ 2’ ಚಿತ್ರ ಬಿಡುಗಡೆ ಆದಾಗ ರಾಜ್ಯದಲ್ಲಿ ವ್ಯಕ್ತವಾದ ಅಭಿಪ್ರಾಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ‘ಇದು ನಿರಾಭಿಮಾನವೊ, ದುರಾಭಿಮಾನವೊ ತಿಳಿಯುತ್ತಿಲ್ಲ. ಕನ್ನಡಿಗರಿಗೆ ಭಾಷೆ, ಮಣ್ಣು ಯಾವುದರ ಬಗ್ಗೆಯೂ ಅಭಿಮಾನ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರನಿರ್ಮಾಪಕ ಸುಂದರಗೌಡ, ಈ ಚಿತ್ರ 318 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ ಎಂದು ಹೇಳಿದರು.

ಅಭಿಮಾನಿಗಳಿಗೆ ಕಿವಿಮಾತು
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ದಾವಣಗೆರೆಯ ದುನಿಯಾ ವಿಜಿ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡೇಶ್ ಅವರನ್ನು ಉದ್ದೇಶಿಸಿ, ‘ನಿನ್ನಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊ. ಅಭಿಮಾನದ ಹೆಸರಲ್ಲಿ ಕುಡಿದು ಗಲಾಟೆ ಮಾಡುವುದು ಬೇಡ; ಇಂತಹ ವೇಳೆಯಲ್ಲೇ ಜನರಲ್ಲಿ ಅಭಿಮಾನ ಜಾಸ್ತಿಯಾಗುವುದು. ನೀನು ಇಂತಹ ಕೆಲಸ ಮಾಡದೆ ಅಭಿಮಾನ ಉಳಿಸಿಕೊಂಡು ಹೋಗು’ ಎಂದು ಬೆನ್ನು ತಟ್ಟಿದರು.

‘ಪಾರ್ವತಮ್ಮ ಗುಣಮುಖರಾಗಲಿ’
‘ಪಾರ್ವತಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದವರು. ಅವರ ಆರೋಗ್ಯ ಸುಧಾರಣೆಯಾಗಲಿ; ಬೇಗ ಗುಣಮುಖರಾಗಿ ಮನೆಗೆ ಮರಳಲಿ’ ಎಂದು ‘ಮಾಸ್ತಿಗುಡಿ’ ಚಿತ್ರತಂಡ ಪ್ರಾರ್ಥಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.