ADVERTISEMENT

ಪೈಪ್‌ಲೈನ್‌ ಒಡೆದು ರೈತರ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:16 IST
Last Updated 22 ನವೆಂಬರ್ 2017, 7:16 IST

ಹರಿಹರ: ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಸೋಮವಾರ ದಾವಣಗೆರೆ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಹರಿದು ರೈತರು ಕಟಾವು ಮಾಡಿದ ಬೆಳೆ ಜಲಾವೃತಗೊಂಡು ಅಪಾರ ನಷ್ಟವುಂಟಾಗಿದೆ.

ರಾಜನಹಳ್ಳಿ ಗ್ರಾಮದ ನದಿ ದಡದಲ್ಲಿ ದಾವಣಗೆರೆಗೆ ನೀರು ಸರಬರಾಜು ಮಾಡುವ ಪಂಪ್‌ಹೌಸ್ ಇದೆ. ಇಲ್ಲಿಂದ ನಾಲ್ಕು ಅಡಿ ಗಾತ್ರದ ಪೈಪ್‌ಲೈನ್ ಮೂಲಕ ಬಾತಿ ಗುಡ್ಡದ ಮೇಲಿರುವ ನೀರು ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜಾಗುತ್ತದೆ. ಗ್ರಾಮದ ಹೊರವಲಯದಲ್ಲಿ ಪೈಪ್ ಹಾದು ಹೋಗಿದೆ. ಶಿಥಿಲಗೊಂಡ ಪರಿಣಾಮ ಪೈಪ್ ಒಡೆದಿದೆ.

ಗ್ರಾಮದ ವಾಲ್ಮೀಕಿ ಬಡಾವಣೆಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ರೈತರು ಭತ್ತ, ಮೆಕ್ಕೆಜೋಳ ಸೇರಿದಂತೆ ಇತರೆ ದವಸ, ಧಾನ್ಯಗಳನ್ನು ಕಟಾವು ಮಾಡಿ, ಕಣ, ಮನೆಯಂಗಳ, ರಸ್ತೆಗಳಲ್ಲಿ ಹರಡಿ ಒಣಗಿಸುತ್ತಿದ್ದರು. ಒಮ್ಮೆಲೆ ನೀರು ರಭಸವಾಗಿ ಹರಿದ ಕಾರಣ ಧಾನ್ಯಗಳು ಕೊಚ್ಚಿಕೊಂಡು ಹೋಗಿವೆ.

ADVERTISEMENT

ದಿಢೀರನೆ ಸಂಭವಿಸಿದ ಪ್ರವಾಹದಿಂದ ಗಾಬರಿಗೊಂಡ ರೈತರು ಧಾನ್ಯಗಳನ್ನು ರಕ್ಷಿಸಲು ಮುಂದಾದರು. ಆದರೆ, ನೀರಿನ ರಭಸಕ್ಕೆ ದವಸ, ಧಾನ್ಯಗಳು ನೀರಿನಲ್ಲಿ ಕೊಚ್ಚಿಹೋದವು. 6 ತಿಂಗಳು ಕಷ್ಟಪಟ್ಟು ಬೆಳೆದ ಬೆಳೆ ನೀರು ಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ತಲುಪದಂತಾಯಿತು ಎಂದು ಗ್ರಾಮಪಂಚಾಯ್ತಿ ಸದಸ್ಯ ಮಂಜುನಾಥ ಬೇಸರ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರು ಸ್ಥಗಿತಗೊಳಿಸಲು ಹರಸಾಹಸ ಪಟ್ಟರು. ಕೊನೆಗೆ ಮಧ್ಯಾಹ್ನ 2ರ ಹೊತ್ತಿಗೆ ಪೈಪ್‌ನಿಂದ ನೀರು ಹರಿಯುವುದು ನಿಂತಿತು. ಅಧಿಕಾರಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಪೈಪ್‌ಲೈನ್ ಒಡೆದಿದೆ ಎನ್ನಲಾಗಿದೆ. ಇನ್ನಾದರೂ, ಅಧಿಕಾರಿ ಗಳು ಪೈಪ್‌ಲೈನ್‌ಗಳ ಪರಿಶೀಲನೆ ನಡೆಸಿ, ಭವಿಷ್ಯದಲ್ಲಿ ನಡೆಯಬಹುದಾದ ಅಪಘಾತಗಳನ್ನು ತಡೆಯಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

‘ಪರಿಹಾರ ನೀಡಿ’
ಗ್ರಾಮದಲ್ಲಿ ಹಾದುಹೋಗಿರುವ ಪೈಪ್‌ಲೈನ್‌ನಿಂದ ಹಲವು ವರ್ಷಗಳ ಕಾಲ ನೀರು ಸೋರಿಕೆಯಾಗುತ್ತಲೇ ಇತ್ತು. ಪರಿಣಾಮ ಸುತ್ತಮುತ್ತಲಿನ ಹತ್ತಾರು ಎಕರೆ ಜಮೀನು ಜೌಗು ಭೂಮಿಯಾಗಿ ಪರಿವರ್ತನೆಯಾಗಿದೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಪಾಲಿಕೆ ರೈತರಿಗೆ ಪರಿಹಾರ ನೀಡಬೇಕು; ಇಲ್ಲವಾದಲ್ಲಿ ಪಂಪ್‌ಹೌಸ್ ಬೇರೆಡೆಗೆ ಶಿಫ್ಟ್ ಮಾಡಲಿ ಎಂದು ರೈತ ಮುಖಂಡ ಪರಶುರಾಮ ಹಾವುಗಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.