ADVERTISEMENT

‘ಬೇಸಿಗೆ ಸಂಭ್ರಮ’ದಲ್ಲಿ ಮಕ್ಕಳಿಗೆ ಆಟ, ಊಟ

ಬರಪೀಡಿತ ತಾಲ್ಲೂಕಿನ ಶಾಲೆಗಳಲ್ಲಿ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಆರಂಭ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:29 IST
Last Updated 19 ಏಪ್ರಿಲ್ 2017, 3:29 IST
ದಾವಣಗೆರೆ: ವೃತ್ತಾಕಾರವಾಗಿ ಕುಳಿತ ಮಕ್ಕಳು ಗಣಿತದ ಸರಳ ಲೆಕ್ಕ ಬಿಡಿಸುತ್ತಿದ್ದರು. ತಮ್ಮದೇ ಕಲ್ಪನೆಯಲ್ಲಿ ಜಾತ್ರೆಯ ಸಂಭ್ರಮ ಕಟ್ಟಿಕೊಡುತ್ತಿದ್ದರು. ಆಟ, ಪಾಠ, ಕೂಗು–ಕೇಕೆ ಎಲ್ಲವೂ ಮೇಳೈಸಿದ್ದವು.
 
ದಾವಣಗರೆ ತಾಲ್ಲೂಕಿನ ಆನಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಭ್ರಮ ಈಗ ಮನೆ ಮಾಡಿದೆ. ಶಾಲೆ ಈಗ ಹತ್ತು ಹಲವು ಚಟುವಟಿಕೆಗಳ ಕೇಂದ್ರವಾಗಿದೆ. 
 
ಪ್ರತಿವರ್ಷ ಬರಪೀಡಿತ ತಾಲ್ಲೂಕುಗಳ ಶಾಲೆಗಳಲ್ಲಿ ಸರ್ಕಾರ ಬಿಸಿಯೂಟದ ವ್ಯವಸ್ಥೆ ಮಾಡುತ್ತಿತ್ತು. ಈ ಬಾರಿ ಊಟದ ಜೊತೆಗೆ ಮಕ್ಕಳ ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ‘ಬೇಸಿಗೆ ಸಂಭ್ರಮ’ ಆಯೋಜಿಸಿದೆ.

ಮಕ್ಕಳು ರಜೆ ಅವಧಿಯನ್ನು ಅರ್ಥಪೂರ್ಣವಾಗಿ ಕಳೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಹೆಸರಿನ ಶಿಬಿರವನ್ನು ಸರ್ಕಾರಿ ಶಾಲೆಗಳಲ್ಲಿ ಇದೇ ಸೋಮವಾರದಿಂದ ಆರಂಭಿಸಿದೆ. ಮೇ 27ರವರೆಗೆ ಒಟ್ಟು ಐದು ವಾರ  ಶಿಬಿರ ನಡೆಯಲಿದೆ. 
 
ಪ್ರಸ್ತಕ ಸಾಲಿನಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾತ್ರ ಶಿಬಿರಾರ್ಥಿಗಳಾಗುವ ಅವಕಾಶ. ಕುಟುಂಬ, ನೀರು, ಆಹಾರ, ಆರೋಗ್ಯ ಹಾಗೂ ಪರಿಸರ ವಿಷಯಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತಿದೆ.

ಪ್ರತಿ ವಾರಕ್ಕೆ ಒಂದು ವಿಷಯದಂತೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತದೆ. ಬೇಸಿಗೆ ಸಂಭ್ರಮ ಪ್ರತಿ ದಿನ ಬೆಳಿಗ್ಗೆ 10ಕ್ಕೆ ಆರಂಭವಾಗಿ ಮಧ್ಯಾಹ್ನ 1ಕ್ಕೆ ಮುಕ್ತಾಯವಾಗುತ್ತದೆ. 
 
5 ವಿದ್ಯಾರ್ಥಿಗಳಿಗೆ ಒಂದು ತಂಡ ಮಾಡಲಾಗುತ್ತದೆ. ಪ್ರತಿ ದಿನ 5 ಚಟುವಟಿಕೆಗಳಂತೆ ಕಲಿಸಲಾಗುತ್ತದೆ. 2 ಗಂಟೆ ಮುಕ್ತ ಕಲಿಕೆಗೆ, 3 ಗಂಟೆ ಗುಂಪು ಕಲಿಕೆಗೆ ವಿಂಗಡಿಸಲಾಗಿದೆ. ಗುಂಪು ಚಟುವಟಿಕೆಯಲ್ಲಿ ಓದಿ ಚರ್ಚಿಸುವುದು, ಮಾಡಿ ಕಲಿಯುವುದು ಹಾಗೂ ಸಮಸ್ಯೆ ಬಿಡಿಸುವುದನ್ನು ಹೇಳಿಕೊಡಲಾಗುತ್ತಿದೆ.

ಈ ವೇಳೆ ಗುಂಪಿನಲ್ಲಿನ ಗೆಳೆಯರ ನಡುವೆ ಸಮನ್ವಯ ಹಾಗೂ ಸಹಕಾರ ಇರಲಿದೆ. ಇಲ್ಲಿ ಭಾಷೆ ಮತ್ತು ಗಣಿತ ವಿಷಯಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತಾರೆ ತರಬೇತಿ ಶಿಕ್ಷಕ ನಾಗೇಂದ್ರ ನಾಯ್ಕ.
 
ಪ್ರತಿ ಶನಿವಾರ ಮಕ್ಕಳ ಮುಕ್ತ ಕಲಿಕಾ ದಿನಾಚರಣೆ ಮಾಡಲಾಗುತ್ತದೆ. ಅಂದು ಮಕ್ಕಳ ಪೋಷಕರು, ಎಸ್‌ಡಿಎಂಸಿ ಸದಸ್ಯರನ್ನು ಕರೆಸಿ ವೀಕ್ಷಣೆಗೆ 
ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ ಶಾಲೆಯ ಬಡ್ತಿ ಪಡೆದ ಮುಖ್ಯ ಶಿಕ್ಷಕ ಲೋಕಣ್ಣ ಮಾಗೋಡ್ರ. 
 
ಬೇಸಿಗೆ ಸಂಭ್ರಮಕ್ಕೆ ಬರುವ ಮಕ್ಕಳ ಜತೆಗೆ ಬಿಸಿಯೂಟಕ್ಕಾಗಿಯೇ ಶಾಲೆಗಳಿಗೆ ಸಾಕಷ್ಟು ಮಕ್ಕಳು ಬರುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಜೀವಮೂರ್ತಿ.
 
ರಾಜ್ಯ ಸರ್ಕಾರ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಇಲಾಖೆ (ಡಿಎಸ್‌ಆರ್‌ಟಿ) ಶಿಬಿರದ ಪಠ್ಯವನ್ನು ರೂಪಿಸಿದೆ. ಪಠ್ಯ ಬೋಧನೆ 
ಕುರಿತಂತೆ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಈ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ಪಡೆಯಲು ಇಲಾಖೆ ಅವಕಾಶ ಕಲ್ಪಿಸಿದೆ ಎನ್ನುತ್ತಾರೆ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಅರುಣ್‌ಕುಮಾರ್.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.