ADVERTISEMENT

ಮೋದಿ ವಿದೇಶ ಪ್ರವಾಸ; ಜನರ ಪ್ರಯಾಸ

ವಿಶ್ವಾಸ ಘಾತಕ ದಿನಾಚರಣೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 8:52 IST
Last Updated 27 ಮೇ 2018, 8:52 IST

ದಾವಣಗೆರೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಶನಿವಾರ ಪಾಲಿಕೆ ಆವರಣದಲ್ಲಿ ವಿಶ್ವಾಸ ಘಾತಕ ದಿನಾಚರಣೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ‘ನಾಲ್ಕು ವರ್ಷಗಳಿಂದಲೂ ಮೋದಿ ವಿದೇಶ ಪ್ರವಾಸ ನಡೆಸುತ್ತಿದ್ದರೆ, ಜನಸಾಮಾನ್ಯರು ಪ್ರಯಾಸದ ಜೀವನ ಸಾಗಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿದೇಶಗಳ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ತಂದು, ಜನಸಾಮಾನ್ಯರ ಖಾತೆಗಳಿಗೆ ತಲಾ ₹ 15 ಲಕ್ಷ ಹಾಕಲಾಗುವುದು ಎಂದು ಮೋದಿ ಭರವಸೆ ನೀಡಿದ್ದರು. ಆದರೆ, ದೊಡ್ಡ ಮುಖಬೆಲೆಯ ನೋಟುಗಳ ಅಮಾನ್ಯ ಹಾಗೂ ಜಿಎಸ್‌ಟಿ ಜಾರಿ ಮಾಡುವ ಮೂಲಕ ಜನ ಸಾಮಾನ್ಯರ ದುಡ್ಡನ್ನೇ ಮೋದಿ ಲೂಟಿ ಹೊಡೆದಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ. ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆ ಎಗ್ಗಿಲ್ಲದೇ ಹಚ್ಚುತ್ತಿದೆ. ಇದರಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಶ್ರೇತೋಭಿವೃದ್ಧಿ ಬಗ್ಗೆ ಯೋಜನೆ ಮಾಡದ ಮೋದಿ, ಸಣ್ಣ ಹಾಗೂ ರಾಜಕೀಯ ಪಕ್ಷಗಳ ಮೇಲೆ ಗಧಾ ಪ್ರಹಾರ ಮಾಡುತ್ತಿದ್ದಾರೆ. ಐಟಿ, ಇಡಿ ದಾಳಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಚ್‌. ಓಬಳಪ್ಪ, ‘ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡವರಿಗೆ ರಕ್ಷಣೆ ಇಲ್ಲದಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವ ಸರ್ಕಾರವನ್ನು ರಾಷ್ಟ್ರಪತಿ ವಜಾಗೊಳಿಸಬೇಕು ಎಂದು ಆಗ್ರಹಿಸಿ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್‌ ಸಾಬ್, ಪಾಲಿಕೆ ಸದಸ್ಯ ಹಾಲೇಶ್, ಕಾಂಗ್ರೆಸ್‌ ಮುಖಂಡರಾದ ಅಯೂಬ್‌ ಪೈಲ್ವಾನ್, ಪಿ.ರಾಜ್‌ಕುಮಾರ್, ಎ. ನಾಗರಾಜ್, ಕೆ.ಬಿ. ನಾಗರಾಜ್, ಮುಜಾಹಿದ್ ಅವರೂ ಇದ್ದರು.

‘ಕರ್ನಾಟಕ ಬಂದ್‌ ಕರೆ ನಾಚಿಕೆಗೇಡು’

ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ₹ 50,000ದವರೆಗೆ ಮನ್ನಾ ಮಾಡಿದೆ. ಆದರೆ, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲಿಲ್ಲ. ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಇದು ನಾಚಿಕೆಗೇಡು ಕೃತ್ಯ ಎಂದು ಎಚ್‌.ಬಿ. ಮಂಜಪ್ಪ ಟೀಕಿಸಿದರು.

**
ಮೋದಿ ಹೇಳಿಕೊಳ್ಳುವಂತೆ ದೇಶದಲ್ಲೀಗ ಒಳ್ಳೆಯ ದಿನಗಳನ್ನು ಕಾಣುತ್ತಿಲ್ಲ. ಈಗ ಇರುವುದು ಜನಸಾಮಾನ್ಯರ ಕಷ್ಟದ ಕ್ಷಣಗಳು
ಕೆ.ಜಿ. ಶಿವಕುಮಾರ್, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.