ADVERTISEMENT

ಯುಗಾದಿ ಒಳಗೆ ಪರಿಹಾರ ನೀಡಲು ಆಗ್ರಹ

ಹೊಳಲ್ಕೆರೆ: ಜೂನ್ ವೇಳೆಗೆ ರೈತರೇ ಮಾಹಿತಿ ಕಳಿಸುವ ಸಾಫ್ಟ್‌ವೇರ್‌ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 5:50 IST
Last Updated 6 ಮಾರ್ಚ್ 2017, 5:50 IST
ಹೊಳಲ್ಕೆರೆ: ‘ಯುಗಾದಿ ಹಬ್ಬದ ಒಳಗೆ ರೈತರ ಖಾತೆಗಳಿಗೆ ಬೆಳೆನಷ್ಟದ ಪರಿಹಾರದ ಹಣವನ್ನು ಜಮಾ ಮಾಡಬೇಕು’ ಎಂದು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
 
ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೇ ಸರಿಯಾದ ಮಾಹಿತಿ ಇಲ್ಲ. 90 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಆನ್‌ಲೈನ್‌ನಲ್ಲಿ 66 ಲಕ್ಷ ಹೆಕ್ಟೇರ್‌ ಬೆಳೆನಷ್ಟದ ಮಾಹಿತಿ ಅಪ್‌ಲೋಡ್‌ ಮಾಡಲಾಗಿದೆ.
 
ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ನಷ್ಟದ ವಿವರಗಳನ್ನು ಸರಿಯಾಗಿ ಅಪ್‌ಲೋಡ್‌ ಮಾಡಿಲ್ಲ. ಬೆಳೆ ನಷ್ಟದ ಮೆಸೇಜ್‌ಗಳು ಕೇರಳದ ರೈತರಿಗೆ ಹೋದ ಘಟನೆಯೂ ನಡೆದಿದೆ. ಇದನ್ನು ಸರಿಪಡಿಸಲು ರೈತರೇ ನೇರವಾಗಿ ಬೆಳೆನಷ್ಟದ ವಿವರಗಳನ್ನು ಕಳಿಸುವ ಬಗ್ಗೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುತ್ತಿದ್ದೇವೆ. ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಈಗಾಗಲೇ ಸರಿಯಾದ ಮಾಹಿತಿ ಅಪ್‌ಲೋಡ್‌ ಆಗಿರುವ ರೈತರಿಗೆ ಶೀಘ್ರವೇ ಪರಿಹಾರಧನ ಕೊಡಬೇಕು’ ಎಂದು ಒತ್ತಾಯಿಸಿದರು.
 
‘ರೈತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಸಾಫ್ಟ್‌ವೇರ್‌ ಸಿದ್ಧಪಡಿಸಿದ್ದೇವೆ. ಮಾಹಿತಿ ಅಪ್‌ಲೋಡ್‌ ಆದ ತಕ್ಷಣ ರೈತರ ಮೊಬೈಲ್‌ಗಳಿಗೆ ಮೆಸೇಜ್‌ ಬರುತ್ತದೆ. ಸದ್ಯ ಇಂಗ್ಲಿಷ್‌ನಲ್ಲಿ ಮೆಸೇಜ್‌ ಬರುತ್ತಿದ್ದು, ಕನ್ನಡಕ್ಕೆ ತರ್ಜುಮೆ ಮಾಡಿ ಕಳಿಸುವ ವ್ಯವಸ್ಥೆ ಮಾಡಲಾಗುವುದು. ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ನಂಬರ್‌ ಲಿಂಕ್‌ ಮಾಡಿಸಬೇಕು’ ಎಂದು  ಸಲಹೆ ನೀಡಿದರು.
 
ನೀರಾವರಿಗೆ ಆದ್ಯತೆ ನೀಡಿ: ‘ಪ್ರತಿ ವರ್ಷ ಬರಕ್ಕೆ ತುತ್ತಾಗುವ ರೈತರು ಕಷ್ಟ ಅನುಭವಿಸುತ್ತಾರೆ. ಸಮಗ್ರ ನೀರಾವರಿಯಿಂದ ಮಾತ್ರ ರೈತರ ಬದುಕು ಹಸನಾಗಲಿದ್ದು, ಸರ್ಕಾರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸಬೇಕು. ನೀರಾವರಿ ಯೋಜನೆಗೆ ಖರ್ಚು ಮಾಡಿದ ಎರಡರಷ್ಟು ಹಣ ರೈತರು ಕೊಡುವ ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರಕ್ಕೇ ಬರಲಿದೆ. ಉಬ್ರಾಣಿ ಏತ ನೀರಾವರಿ ಯೋಜನೆ ಚನ್ನಗಿರಿ ತಾಲ್ಲೂಕಿನ ರೈತರಿಗೆ ವರದಾನವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯೂ ಆದಷ್ಟು ಶೀಘ್ರ ಮುಗಿದು ರೈತರಿಗೆ ನೀರು ಸಿಗಲಿ’ ಎಂದು ಸಿರಿಗೆರೆ ಶ್ರೀಗಳು ಹಾರೈಸಿದರು.  
 
ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬರಗಾಲದಿಂದ ಅಡಿಕೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಒಂದು ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಯಾವುದೇ ಸರ್ಕಾರ ಬರಲಿ ಜನಹಿತದ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ಸಮರ್ಪಕ ನೀರು, ವಿದ್ಯುತ್‌, ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತನೇ ಸರ್ಕಾರಕ್ಕೆ ಅನುದಾನ ಕೊಡುತ್ತಾನೆ’ ಎಂದರು.
 
ಮಾಜಿ ಶಾಸಕ ಎಂ.ಚಂದ್ರಪ್ಪ, ಪೊಲೀಸ್‌ ಜಂಟಿ ಆಯುಕ್ತ ಡಾ.ಡಿ.ಸಿ. ರಾಜಪ್ಪ, ಪ.ಪಂ.ಅಧ್ಯಕ್ಷೆ ಸವಿತಾ ಬಸವರಾಜು, ಹನುಮಲಿ ಷಣ್ಮುಖಪ್ಪ, ಪಿ.ರಮೇಶ್‌, ಎಸ್‌.ಎಂ. ಆನಂದ ಮೂರ್ತಿ, ತಹಶೀಲ್ದಾರ್‌ ಸೋಮ ಶೇಖರ, ಜಿ.ಎಂ.ಸುರೇಶ್‌, ಹನುಮಂತೇಗೌಡ, ಜಿ.ಎಸ್‌. ಮಂಜು ನಾಥ್‌, ಪುಟ್ಟಪ್ಪ, ರೇವಣಸಿದ್ದಪ್ಪ, ಛಾಯಾ ಜಿ.ಎಸ್‌. ಮಂಜುನಾಥ್‌, ನಳಿನಾ ಬಿ.ಕೆ.ಶಿವಕುಮಾರ್‌, ಕೋಕಿಲಾ ನಾಗರಾಜ್‌, ದೀಪಾ ಬಿ.ಎಸ್‌.ಹರೀಶ್ ಬಾಬು, ಶರ್ಮಿಳಾ ಜಿ.ಎಸ್‌.ವಸಂತ್‌ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
* ಇಲ್ಲಿನ ಕಲ್ಯಾಣ ಮಂಟಪವನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದ್ದು, ಇಲ್ಲಿ ಮದುವೆ ಆಗುವ ದಂಪತಿಗಳ ಬದುಕೂ ಅಷ್ಟೇ ಸುಂದರವಾಗಿರಲಿ.
–ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ ಮಠ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.