ADVERTISEMENT

‘ಅನ್ನದಾತರನ್ನು ಕಡೆಗಣಿಸಿದವರಿಗೆ ಉಳಿಗಾಲವಿಲ್ಲ’

ನವಲಗುಂದ, ಕುಂದಗೋಳದಲ್ಲಿ ಜೆ.ಡಿ.ಎಸ್‌ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:00 IST
Last Updated 25 ಮೇ 2017, 9:00 IST

ನವಲಗುಂದ: ‘ಜಗತ್ತಿನ ಎರಡು ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ಹಾಗೂ ಅಮೆರಿಕಾಗಳ ಪೈಕಿ ರಷ್ಯಾದಲ್ಲಿ ರೈತರನ್ನು ಕಡೆಗಣಿಸಿದ್ದರಿಂದ ಅನ್ನ ಉತ್ಪಾದಿಸುವ ಶಕ್ತಿ ಇಲ್ಲದಂತಾಗಿ ಆ ರಾಷ್ಟ್ರ ಅವನತಿಯತ್ತ ಸಾಗಿದೆ. ಅದೇ ರೀತಿ ಭಾರತದಲ್ಲಿ ಅನ್ನದಾತನನ್ನು ಕಡೆಗಣಿಸಿದ ಸರ್ಕಾರಗಳಿಗೆ ಉಳಿಗಾಲವಿಲ್ಲ’ ಎಂದು ಜೆ.ಡಿ.ಎಸ್ ವೀಕ್ಷಕ ಮರಿಲಿಂಗೇಗೌಡ ಅಭಿಪ್ರಾಯಪಟ್ಟರು.

ಇಲ್ಲಿಯ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗಾಗಿ ಈ ಭಾಗದಲ್ಲಿ ರೈತರು ವರ್ಷಗಟ್ಟಲೇ ಹೋರಾಟ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡರೂ ಬಿಜೆಪಿ ಮುಖಂಡರಾದ ಜಗದೀಶ ಶೆಟ್ಟರ್ ಕಣ್ಣೆತ್ತಿಯೂ ನೋಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾವಭಾವವೇ ಅಸಹ್ಯ ತರಿಸುವಂತಿದೆ’ ಎಂದು ಟೀಕಿಸಿದರು.

ಇನ್ನೊಬ್ಬ ವೀಕ್ಷಕ ಚಂದ್ರಶೇಖರ ಮಾತನಾಡಿ ‘ರೈತರ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಪಾಪಿಗಳು. ಜಗದೀಶ ಶೆಟ್ಟರ್‌, ವಿನಯ ಕುಲಕರ್ಣಿ ಕಪಟ ನಾಟಕದ ಪಾತ್ರಧಾರಿಗಳು’ ಎಂದು ದೂರಿದರು.

ಮುಖಂಡರಾದ ರಾಜಣ್ಣ ಕೊರವಿ, ಮುಜಾಹಿದ ಕಾಂಟ್ರ್ಯಾಕ್ಟರ್, ಬಿ.ಬಿ. ಗಂಗಾಧರಮಠ, ವೀರಣ್ಣ ನೀರಲಗಿ, ಶಿವಶಂಕರ ಕಲ್ಲೂರ, ಫಮಿದಾಬೇಗಂ ಕಿಲ್ಲೇದಾರ, ಐ.ಜಿ. ಸಮುದ್ರಿ  ಮಾತನಾಡಿದರು.

ಅಲ್ಪಸಂಖ್ಯಾತರ ಮುಖಂಡ ಹಜರತ್ ಸೈಯ್ಯದ, ಶ್ರೀಶೈಲ ಮೂಲಿಮನಿ, ರಮಾನಾಥ ಶಣ್ಯೆ, ಶಿವಲೀಲಾ ಬೋರಶೆಟ್ಟರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ‘ಕುಮಾರಣ್ಣ ಮುಖ್ಯಮಂತ್ರಿ  ಆಗುವುದು  ಖಚಿತ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT