ADVERTISEMENT

ಉಣಕಲ್‌ ಸಿದ್ಧಪ್ಪಜ್ಜ ಜಾತ್ರಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:37 IST
Last Updated 21 ಜನವರಿ 2017, 5:37 IST
ಉಣಕಲ್‌ ಸಿದ್ಧಪ್ಪಜ್ಜ ಜಾತ್ರಾ  ಸಂಭ್ರಮ
ಉಣಕಲ್‌ ಸಿದ್ಧಪ್ಪಜ್ಜ ಜಾತ್ರಾ ಸಂಭ್ರಮ   

ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಶ್ರೀ ಸದ್ಗುರು ಸಿದ್ಧಪ್ಪಜ್ಜನವರ 96ನೇ ಪುಣ್ಯಾರಾಧನೆ ಹಾಗೂ ರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಸಿದ್ಧಪ್ಪಜ್ಜನವರ ಮೂಲ ಗದ್ದುಗೆಮಠವನ್ನು ತಳಿರು, ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮುಂಜಾನೆ ಶ್ರೀಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ನಡೆಯಿತು. ಬಳಿಕ ಸಿದ್ದಪ್ಪಜ್ಜನ ಮೂರ್ತಿಗೆ ಕ್ಷೀರಾಭಿಷೇಕ, ಹೂವಿನ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.

ಮೂಲಮಠದ ಆವರಣದಿಂದ ಸಾಯಿನಗರ ರಸ್ತೆಯಲ್ಲಿರುವ ಪಾದಗಟ್ಟಿವರೆಗೆ ರಥವನ್ನು ಭಕ್ತರು ಎಳೆದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ಶ್ರೀ ಗಜಾನನ ಜಾನಪದ ಕಲಾಸಂಘದ ಶಿವರಾಮಪ್ಪ ವಾಲಿ ಸಂಗಡಿಗರ ಜಗ್ಗಲಗಿ ಕುಣಿತ ಮತ್ತು ಖಣಿ, ತಾಳ ವಾದನ ಹಾಗೂ ಕರಡಿಮಜಲು, ಡೊಳ್ಳಿನ ಕುಣಿತ, ಕೋಲಾಟ, ಭಜನೆ, ಜಾಂಜ್‌ ಗಮನ ಸೆಳೆಯಿತು. ಈ ಬಾರಿಯ ಜಾತ್ರೆಯಲ್ಲಿ ಬಾಳೆಹಣ್ಣು, ಬಾರಿ ಹಣ್ಣು, ಲಿಂಬೆಹಣ್ಣು, ಪೇರಲಹಣ್ಣುಗಳನ್ನು ಎಸೆಯದಂತೆ ನಿರ್ಬಂಧ ವಿಧಿಸಿದ್ಧ ಕಾರಣ ಭಕ್ತರು ರಥಕ್ಕೆ ಉತ್ತತ್ತಿಯನ್ನು ಮಾತ್ರ ಅರ್ಪಿಸಿ ಹರಕೆ ಒಪ್ಪಿಸಿದರು. ರಥೋತ್ಸವ ಸಮಯದಲ್ಲಿ ವಿಶೇಷ ಸಿಡಿಮದ್ದು ಹಾರಿಸಲಾಯಿತು.

‘ಮಹಾತ್ಮರಾದವರು ಇದ್ದಾಗ ಮೇರಿಬಾರದಲೇ ಸೂಳೀತಮ್ಮಾ, ಸತ್ತಮ್ಯಾಲ ಸಾವಿರಾರು ವರುಷ ಮೇರಿಬೇಕಲೇ ಸೂಳೀತಮ್ಮಾ’ ‘ಮಸ್ತಕನ ಪುಸ್ತಕ ಮಾಡಬೇಕಲೇ ಸೂಳೇತಮ್ಮಾ, ಬಿಳಿ ಹಾಳಿ ಮ್ಯಾಲ ಕರೆಗೀರ ಹೊಡೆದರೆ ಶ್ಯಾಣ್ಯಾ ಆಗತಾರೇನಲೇ ಸೂಳೀತಮ್ಮಾ’ ಎಂಬ ಸಿದ್ದಪ್ಪಜ್ಜನವರ ‘ಅಮರವಾಣಿ’ಗಳಿರುವ ಪ್ಲೆಕ್ಸ್‌ಗಳು ಜಾತ್ರೆಯಲ್ಲಿ ಭಕ್ತರ ಗಮನ ಸೆಳೆದವು. ಬೆಂಡು–ಬತಾಸು, ಚುರು ಮುರಿ–ಮಂಡಕ್ಕಿ, ಡಾಣಿ ಹಾಗೂ ಮತ್ತಿತರರ ತಿಂಡಿ ತಿನಿಸುಗಳನ್ನು ಭಕ್ತರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ತಿರುಗುಣಿ, ತೊಟ್ಟಿಲು, ಕುದುರೆ ಆಟಿಕೆಗಳನ್ನು ಹತ್ತಿ ಮಕ್ಕಳು ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.