ADVERTISEMENT

ಕಂತಿ–ಕಂತಿ ನೋಟ್‌ ಇಟ್ಟಿದ್ದು ಬಟಾಬೈಲಾತು...

9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:59 IST
Last Updated 21 ಜನವರಿ 2017, 5:59 IST
ಕಂತಿ–ಕಂತಿ ನೋಟ್‌  ಇಟ್ಟಿದ್ದು ಬಟಾಬೈಲಾತು...
ಕಂತಿ–ಕಂತಿ ನೋಟ್‌ ಇಟ್ಟಿದ್ದು ಬಟಾಬೈಲಾತು...   

ಶಿಶುವಿನಹಾಳ ಶ್ರೀ ಶರೀಫ್ ಶಿವಯೋಗಿ ವೇದಿಕೆ (ಶಿಗ್ಗಾವಿ): ನೋಟ್‌ ಬ್ಯಾನ್‌ನಿಂದ ಪಾಳೇಕ್‌ ನಿಲ್ಲದವರ ಮನ್ಯಾಗ, ಬಾತ್‌ರೂಮನ್ಯಾಗ, ಓಡಾಡೊ ಗಾಡ್ಯಾಗ
ಕಂತೆ ಕಂತೆ ನೋಟ್‌ ಇಟ್ಟಿದ್ದು ಟಿವಿಯೊಳಗ ಬಟಾಬೈಲಾತ.
ಹೇಳಿಕೊಳ್ಳಲಾಗದ ಸಂಕಟ, ಹಾರಾಟ, ಚೀರಾಟ
ಇದರ ಮಧ್ಯ ದೊಡ್ಡದೊಂದ ಸತ್ಯ ಗೊತ್ತಾತ,
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ...

–ಕವಿ ಅಶೋಕ ಕೊಂಡ್ಲಿ ಯವರ ‘ಹೊಸ ನೋಟ್‌’ ಎಂಬ ಶೀರ್ಷಿಕೆಯು ಕವಿತೆ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತು.
ಶಿಗ್ಗಾವಿಯ ಕೃಷಿ ಉತ್ಪನ ಮಾರುಕಟ್ಟೆ ಆವರಣದ ಶಿಶುವಿನಹಾಳ ಶ್ರೀಶರೀಫ ಶಿವಯೋಗಿ ಪ್ರಧಾನ ವೇದಿಕೆಯಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕವಿಗೋಷ್ಠಿ’ಯಲ್ಲಿ ಅವರು ಕವನ ವಾಚನ ಮಾಡಿದರು.

‘ಬೇಲಿ ಮೇಲಿನ ಹೂಗಳು ನಾವು, ಬೇಲಿ ಮೇಲಿನ ಮುಳ್ಳುಗಳು ನೆಟ್ಟರು,
ಅಳದೇ ನಗದೇ ಮಕರಂದ ಸೂಸುವವರು.
ಬಿಸಿಲಿನ ಹೊಡೆತಕ್ಕೂ ಜಗ್ಗದೇ, ಮಳೆಯ ಹೊಡೆತಕ್ಕೂ
ಕುಗ್ಗದೇ ಸದಾ ಕಾಂತಿಯ ಚಲ್ಲುವೆವು ನಾವು,
ಬೇಲಿ ಮೇಲಿನ ಹೂಗಳು ನಾವು...’

–ಎಂಬ ಮಹೇಶ ವಾಗತ್ತಿ ಯವರ ‘ಬೆಲಿ ಮೇಲಿನ ಹೂಗಳು ನಾವು’ ಕವನವು ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು.
ಡಾ.ಸುನೀಲಚಂದ್ರ ಅವರಾದಿ ‘ಆಶಯ’, ಸಂತೋಷಗೌಡ ಪಾಟೀಲ್‌ ‘ಅಂದದ ನಾಡು’, ರಮ್ಜಾನ್‌ ಕಿಲ್ಲೇದಾರ್ ‘ಗಜಲ್‌’, ಜಮೀರ್‌ ರಿತ್ತ ‘ಜೀವನದ ಪ್ರಶ್ನೆಗಳು’ ಲಿಂಗರಾಜ ಸೊಟ್ಟಪ್ಪನವರ ‘ಪಾಪು ಕಳೆದು ಹೋಗಿದ್ದಾನೆ’, ಡಾ.ಸುಜಾತ ದೇವರಮನಿ ‘ಅರಿವಿನ ಹೆಜ್ಜೆ’ ಗಿರಿಜಾ ಮಾಲಗಾವಿ ‘ಕರುನಾಡು’, ಭಾನುನುಪ್ರಕಾಶ ಕುಲಕರ್ಣಿ ‘ಇವನೆ ಕಾಣಿರೊ ನಮ್ಮ ಅನ್ನದಾತ’, ಪರಮೇಶ ಬಾರಂಗಿ ‘ತಿಳವಳಿಕೆ’, ಆರ್‌.ಕೆ.ಸುಧಾಬಾಯಿ ‘ಜೋಗ ಜಲಪಾತ’,  ಉಷಾ ಪಾಟೀಲ್‌ ‘ನನಗಿನ್ನು ಸ್ವಾತಂತ್ರ್ಯ ಸಿಕ್ಕಿಲ್ಲ’, ಲಕ್ಷೀಕಾಂತ ಮಿರಜಕರ್‌ ‘ಗಜಲ್‌’, ಸಿ.ಎಸ್‌.ಶಿಗ್ಗಾವಿ ‘ನನಗೊಂದು ಹೆಣ್ಣ ಕೊಡಿ’, ಪ್ರಭಾಕರ ಶಿಗ್ಲಿ ‘ನನ್ನ ಸಂಸ್ಕೃತಿ’, ಅನಂತ ಕಣೇಕಲ್‌ ‘ವಧು ಬೇಕಾಗಿದೆ’, ವೇದರಾಣಿ ದಾಸನೂರ ‘ಸೀರೆ
ಎಂದರೆ’, ಆರ್‌.ಕೆ.ಹುಬ್ಬಳ್ಳಿ ‘ಜೈ ಎಂದೇವ ಹಾವೇರಿಗೆ’, ಜಿ.ಎಸ್‌.ಅರಗೋಳ ‘ತೋರಣ’, ಎನ್‌.ಎಸ್‌.ಹೆಗ್ಗೇರಿ ‘ನಮ್ಮ ಜಿಲ್ಲೆ’, ಬಿ.ಎಚ್‌, ವಡೇರಹಳ್ಳಿ ‘ವಿಶ್ವ ಮಾನವ ಬೀರಿದ ಬೆಳಕು’, ಎನ್‌.ಎಚ್‌, ಬರಗೂರ ‘ಬರ ಬರಬೇಡ’ ಎಂಬ ಶೀರ್ಷಿಕೆಯ ಕವಿತೆ ಸೇರಿದಂತೆ ಒಟ್ಟು 32 ಕವಿ ಹಾಗೂ ಕವಯತ್ರಿಗಳು ವಾಚನ ಮಾಡಿದರು.

ಕವಿಗೋಷ್ಠಿಯ ಅಧ್ಯಕ್ಷತೆ ಅವಹಿಸಿದ್ದ ಡಾ.ಸತೀಶ ಕುಲಕರ್ಣಿ ಮಾತನಾಡಿ, ‘ಇಂದಿನ ಕವಿತೆಗಳಲ್ಲಿ ಪ್ರಯೋಗ ಶೀಲತೆಯ ಕೊರತೆ ಎದ್ದು ಕಾಣುತ್ತಿದೆ. ಕವಿತೆಗಳಲ್ಲಿ ಪರಂಪರೆಯನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಕವಿತೆಯ ಮೌಲ್ಯ ಹೆಚ್ಚಾಗುತ್ತದೆ’ ಎಂದರು. ನಂತರ ‘ನನ್ನ ಚಪ್ಪಲಿಗಳು’ ಎಂಬ ಶೀರ್ಷಿಕೆಯ ಕವನ ವಾಚನ ಮಾಡಿದರು.

ಸಾಹಿತಿ ಜೀವರಾಜ ಛತ್ರದ ಮಾತನಾಡಿ, ‘ಸಾಹಿತಿಗಳು ಸಾಹಿತ್ಯದ ಎಲ್ಲ  ಪ್ರಕಾರಗಳಲ್ಲಿ ಕೃಷಿ ಮಾಡುತ್ತಾ, ಒಂದು ಕ್ಷೇತ್ರದಲ್ಲಿ ಮಾತ್ರ
ವಿಶೇಷ ಪಾಂಡಿತ್ಯ ಬೆಳೆಸಿಕೊಳ್ಳಲು ಯತ್ನಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.