ADVERTISEMENT

ತೆಗೆದಷ್ಟು ಬೆಳೆಯುತ್ತಲೇ ಇದೆ ಉಣಕಲ್‌ ಕೆರೆ ಕಳೆ

ಮನೋಜ ಕುಮಾರ್ ಗುದ್ದಿ
Published 24 ಏಪ್ರಿಲ್ 2017, 5:14 IST
Last Updated 24 ಏಪ್ರಿಲ್ 2017, 5:14 IST
ಕೆರೆಯಲ್ಲಿ ವಿಹಾರ ದೋಣಿಯ ಸುತ್ತಲೂ ಆವರಿಸಿಕೊಂಡಿರುವ ಅಂತರಗಂಗೆ ಕಳೆ   ಪ್ರಜಾವಾಣಿ ಚಿತ್ರ: ಎಂ.ಆರ್. ಮಂಜುನಾಥ್‌
ಕೆರೆಯಲ್ಲಿ ವಿಹಾರ ದೋಣಿಯ ಸುತ್ತಲೂ ಆವರಿಸಿಕೊಂಡಿರುವ ಅಂತರಗಂಗೆ ಕಳೆ ಪ್ರಜಾವಾಣಿ ಚಿತ್ರ: ಎಂ.ಆರ್. ಮಂಜುನಾಥ್‌   

ಹುಬ್ಬಳ್ಳಿ: ಜಿಲ್ಲಾಡಳಿತ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ಹಲವು ಸ್ವಯಂ ಸೇವಾ ಸಂಸ್ಥೆಗಳ ಸತತ ಪ್ರಯತ್ನದ ನಡುವೆಯೇ ಉಣಕಲ್‌ ಕೆರೆಯ ಕಳೆ ಬೆಳೆಯುತ್ತಲೇ ಇದೆ.ಕೆಲ ತಿಂಗಳ ಹಿಂದೆ ₹20 ಲಕ್ಷ ವೆಚ್ಚದಲ್ಲಿ ಕೆರೆಯಲ್ಲಿರುವ ಅಂತರಗಂಗೆ ಕಳೆಯನ್ನು ಸಂಪೂರ್ಣ ತೆಗೆಯುವಂತೆ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಹಲವು ದಿನಗಳ ಸತತ ಕಾರ್ಯಾಚರಣೆಯ ಬಳಿಕ ಒಂದಷ್ಟು ಕಳೆ ತೆಗೆದು ಹಾಕಿದ್ದ ಸಂಸ್ಥೆಯು ಈ ಕಾರ್ಯಾಚರಣೆಯನ್ನು ಏಕಾಏಕಿ ಸ್ಥಗಿತಗೊಳಿಸಿತ್ತು. ಏಕೆಂದರೆ, ಬೋಟ್‌ ಮಾದರಿಯ ಯಂತ್ರವು ಭಾರಿ ಕಳೆಯನ್ನು ತೆಗೆಯಲಾಗದೇ ಹಲವು ಬಾರಿ ಕೆಟ್ಟು ನಿಲ್ಲುತ್ತಿತ್ತು.

ಇದಾದ ಬಳಿಕ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್‌ ಸ್ವಯಂ ಸೇವಕರು ಹಾಗೂ ಪರಿಸರ ಕಾಳಜಿಯುಳ್ಳ ಸಂಘ ಸಂಸ್ಥೆಗಳ ಕಾರ್ಯಕರ್ತರೂ ಶ್ರಮದಾನ ಮಾಡುವ ಮೂಲಕ ಒಂದಷ್ಟು ಭಾಗದಲ್ಲಿ ಅಂತರಗಂಗೆಯನ್ನು ತೆಗೆದು ದಡಕ್ಕೆ ಹಾಕಿದ್ದರು.ಇನ್ನೇನು ಇಡೀ ಕೆರೆ ಕಳೆ ಮುಕ್ತವಾಗಿ ಶುದ್ಧ ನೀರಿನಿಂದ ಕಂಗೊಳಿಸಲಿದೆ ಎನ್ನುವಷ್ಟರಲ್ಲಿಯೇ ಮತ್ತೆ ಕೆರೆಯ ಶೇ 60ರಷ್ಟು ಭಾಗವನ್ನು ಆವರಿಸಿಕೊಂಡಿದೆ.

ದೋಣಿ ವಿಹಾರಕ್ಕೂ ಅಡ್ಡಿ ಆಗುವಂತೆ ಕೆರೆಯ ಅರ್ಧ ಭಾಗ ಆವರಿಸಿಕೊಂಡಿದ್ದು, ದಡದಿಂದ ವಿವೇಕಾನಂದ ಪ್ರತಿಮೆ ಇರುವ ಜಾಗ ತಲುಪಲು ದೋಣಿಯು ಸುತ್ತಿ ಬಳಸಿ ಹೋಗಬೇಕಿದೆ. ದಿನೇ ದಿನೇ ಅಲ್ಲಿಯೂ ದಟ್ಟವಾದ ಅಂತರಗಂಗೆಯು ಬೆಳೆಯುತ್ತಿರುವುದರಿಂದ ಕೆಲವು ದಿನಗಳ ಬಳಿಕ ದೋಣಿ ವಿಹಾರವನ್ನೇ ಸ್ಥಗಿತಗೊಳಿಸುವ ಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿಗೆ ವಿಹಾರಕ್ಕೆ ಬಂದಿದ್ದ ವಿಜಯನಗರದ ನಿವಾಸಿ ಸಲ್ಮಾ.

ADVERTISEMENT

ಒಮ್ಮತಕ್ಕೆ ಬರಲು ಸಭೆ ವಿಫಲ: ಕೆರೆಯಲ್ಲಿನ ಕಳೆಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಸಂಬಂಧ ಕೈಗೊಳ್ಳುವ ಕ್ರಮದ ಬಗ್ಗೆ ಚರ್ಚಿಸಲು ಮಹಾನಗರ ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರು ಶನಿವಾರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳ ಸಭೆಯನ್ನು ನಡೆಸಿದರು.‘ಒಮ್ಮತದ ನಿರ್ಧಾರಕ್ಕೆ ಬರಲು ಸಭೆ ವಿಫಲವಾಗಿದ್ದು, ಸೋಮವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ’ ಎಂದು ಆಯುಕ್ತ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆಯ ನೀರನ್ನು ಖಾಲಿ ಮಾಡಿ: ಸಂಪೂರ್ಣ ಕಳೆ ನಿವಾರಣೆಗಾಗಿ ಕೆರೆಯಲ್ಲಿನ ನೀರನ್ನು ಖಾಲಿ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರು ಕೆಲವು ದಿನಗಳ ಹಿಂದೆ ಸಲಹೆ ನೀಡಿದ್ದರು.

ಕೊಳಚೆ ನೀರು ತಡೆಯಿರಿ:  ‘ಅಂತರಗಂಗೆ ಬೆಳೆಯಲು ಪ್ರಮುಖ ಕಾರಣ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದು. ಉಣಕಲ್‌ ಸುತ್ತಮುತ್ತಲಿನ ಬಡಾವಣೆಗಳಿಂದ ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದ ಅದರಲ್ಲಿ ಲವಣಾಂಶಗಳನ್ನು ಹೀರಿಕೊಂಡು ಕಳೆ ವಿಸ್ತಾರಗೊಳ್ಳುತ್ತದೆ. ಹಾಗಾಗಿ, ಈ ನೀರು ಬರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಧಾರವಾಡದ ಸಸ್ಯವಿಜ್ಞಾನಿ ಡಾ. ಆರ್‌. ಪರಿಮಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.