ADVERTISEMENT

ಮೇ ತಿಂಗಳಿಂದ ದಿನಕ್ಕೆ 6 ವಿಮಾನ ?

ಬೆಂಗಳೂರು–ಹುಬ್ಬಳ್ಳಿ ನಗರಗಳ ನಡುವೆ ವಿಮಾನ ಹಾರಾಟಕ್ಕೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:31 IST
Last Updated 16 ಫೆಬ್ರುವರಿ 2017, 11:31 IST
ಹುಬ್ಬಳ್ಳಿ: ಉತ್ತರ ಕರ್ನಾಟಕದ ಅದರಲ್ಲೂ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಬೆಂಗಳೂರು – ಹುಬ್ಬಳ್ಳಿ ನಗರಗಳ ನಡುವೆ ಮೇ 1ರಿಂದ ಪ್ರತಿನಿತ್ಯ ಆರು ವಿಮಾನಗಳು ಹಾರಾಟ ಆರಂಭಿಸಲು ಭರದ ಸಿದ್ಧತೆ  ನಡೆದಿದೆ. 
 
ಅಂದುಕೊಂಡಂತೆ ಆರು ವಿಮಾನಗಳು ಹಾರಾಟ ಆರಂಭಿಸಿದರೆ ಎರಡು ನಗರಗಳ ನಡುವಿನ ವಿಮಾನಯಾನ ದರದಲ್ಲಿ ಭಾರಿ ಇಳಿಕೆಯ ಜೊತೆಗೆ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಲಭಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೊಸ ಮೆರಗು ಲಭಿಸುವ ಸಾಧ್ಯತೆ ಇದೆ.
 
‘ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸದಾಗಿ ಜಾರಿಗೆ ತಂದಿರುವ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಬೆಂಗಳೂರು–ಹುಬ್ಬಳ್ಳಿ ನಡುವೆ ಹೊಸದಾಗಿ ಹಾರಾಟ ಆರಂಭಿಸುವ ಸಂಬಂಧ ಏರ್‌ ಇಂಡಿಯಾ, ಟ್ರೂ ಜೆಟ್‌, ಏರ್‌ ಕಾರ್ನಿವಲ್ ಮತ್ತು ಏರ್‌ ಪೆಗಾಸಸ್‌ ಸಂಸ್ಥೆಗಳು ಪ್ರಸ್ತಾವ ಸಲ್ಲಿಸಿವೆ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಶಿವಾನಂದ ಬೇನಾಳ ‘ಪ್ರಜಾವಾಣಿ’ಗೆ ತಿಳಿಸಿದರು.
 
ಏರ್‌ ಇಂಡಿಯಾ ವಿಮಾನವು ಸದ್ಯ ವಾರದಲ್ಲಿ ನಾಲ್ಕು ದಿನ ಹಾರಾಟ ನಡೆಸುತ್ತಿದ್ದು, ಮೇನಿಂದ ವಾರಪೂರ್ತಿ  ಹಾರಾಟ ನಡೆಸಲಿದೆ. ಇದರ ಜೊತೆಗೆ ಇದೇ ಸಂಸ್ಥೆಯ ಮತ್ತೊಂದು ವಿಮಾನವು ಬೆಂಗಳೂರು–ಹುಬ್ಬಳ್ಳಿ–ಮುಂಬೈ ನಡುವೆ ಸಂಚರಿಸುವ ಸಾಧ್ಯತೆ ಇರುವುದಾಗಿ ಅವರು ತಿಳಿಸಿದರು.
 
ಏರ್‌ ಇಂಡಿಯಾ ವಿಮಾನವು ಪ್ರತಿದಿನ ಸಂಜೆ 5.05ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದು 5.35ಕ್ಕೆ ಹೊಡಲಿದೆ. ರಾತ್ರಿ 7.05ಕ್ಕೆ ಎರಡನೇ ಟ್ರಿಪ್‌ ಬರಲಿದ್ದು, 7.35ಕ್ಕೆ ಹೊರಡಲಿದೆ ಎಂದರು. ಟ್ರೂಜೆಟ್‌ ವಿಮಾನವು ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 8.25ಕ್ಕೆ ಹುಬ್ಬಳ್ಳಿಗೆ ಬರಲಿದೆ. ಬಳಿಕ 8.45ಕ್ಕೆ ಬೆಂಗಳೂರಿಗೆ ಹೊರಡಲಿದೆ ಎಂದು ಹೇಳಿದರು.
 
2016ರ ನವೆಂಬರ್‌ನಿಂದ ಹಾರಾಟ ಆರಂಭಿಸಬೇಕಾಗಿದ್ದ ಏರ್ ಕಾರ್ನಿವಲ್‌ ವಿಮಾನವು ಕಾರಣಾನಂತರದಿಂದ ಸಂಚಾರ ಆರಂಭಿಸಿರಲಿಲ್ಲ. ಇದೀಗ ಮೇ ತಿಂಗಳಿಂದ ಪ್ರತಿದಿನ ಬೆಳಿಗ್ಗೆ 10 ರಿಂದ 11ರ ನಡುವೆ ಹಾಗೂ ಮಧ್ಯಾಹ್ನ 12ರಿಂದ 1ರ ನಡುವೆ ಎರಡು ಬಾರಿ ಹಾರಾಟ ಆರಂಭಿಸುವುದಾಗಿ ಪ್ರಸ್ತಾವ ಸಲ್ಲಿಸಿದೆ ಎಂದು ಹೇಳಿದರು.
 
ಆರು ತಿಂಗಳಿಂದ ಹಾರಾಟ ನಿಲ್ಲಿಸಿರುವ ಏರ್‌ ಪೆಗಾಸಸ್‌ ವಿಮಾನವೂ ಪ್ರತಿ ದಿನ ಬೆಂಗಳೂರು–ಹುಬ್ಬಳ್ಳಿ ನಡುವೆ ಹಾರಾಟ ಆರಂಭಿಸುವುದಾಗಿ ಮುಂದೆ ಬಂದಿದ್ದು, ಇನ್ನೂ ಸಮಯ ನಿಗದಿಯಾಗಿಲ್ಲ ಎಂದು ಅವರು ಹೇಳಿದರು.
 
* ಆರು ವಿಮಾನ ಹಾರಾಟದಿಂದ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.   ವಾಣಿಜ್ಯ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗಲಿದೆ
-ಶಿವಾನಂದ ಬೇನಾಳ, ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.