ADVERTISEMENT

ಯೋಜನೆ ಮುಗಿಸಲು 6 ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:52 IST
Last Updated 20 ಏಪ್ರಿಲ್ 2017, 8:52 IST

ಧಾರವಾಡ: ಬಿ.ಆರ್‌.ಟಿ.ಎಸ್‌ ಯೋಜನೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಇಲ್ಲಿನ ಹೈಕೋರ್ಟ್‌ ವಿಭಾಗೀಯ ಪೀಠ ಬುಧವಾರ ಕಂಪೆನಿಗೆ ಕಟ್ಟಾಜ್ಞೆ ಮಾಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್ ವಿಭಾಗೀಯ ಪೀಠ ಹೊರತುಪಡಿಸಿ ಯಾವುದೇ ಅಧೀನ ನ್ಯಾಯಾಲಯಗಳು ತಡೆಯಾಜ್ಞೆ ನೀಡಬಾರದು ಎಂದೂ ಅದು ಸೂಚಿಸಿದೆ. ಬಿಆರ್‌ಟಿಎಸ್‌ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡ ಭೂವಿವಾದಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿನೀತ ಕೊಠಾರಿ ಮತ್ತು ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ, ‘ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನ್ಯಾಯಪೀಠ ನೀಡುವ ಆದೇಶ ತೊಂದರೆ ಮಾಡುವಂತಿರಬಾರದು’ ಎಂದು ಅಭಿಪ್ರಾಯಪಟ್ಟಿದೆ.

ಯೋಜನೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನೀಡಬೇಕು ಎಂದು ಕೋರಿ ಅನಿಲ ಮಂಜನಬೈಲ್‌ ಮತ್ತು ಇತರ ನಾಲ್ಕು ಮಂದಿ ಹಾಗೂ ಕೆ.ವಾದಿರಾಜರಾವ್‌ ಎನ್ನುವವರು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.ಈ ಮೇಲ್ಮನವಿಗಳನ್ನು ವಜಾಗೊಳಿಸಿದ ಪೀಠ, ಮೇಲ್ಮನವಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಪ್ರತಿ ಮೇಲ್ಮನವಿದಾರರು ತಲಾ ₹5 ಸಾವಿರ ವೆಚ್ಚ ಪಾವತಿ ಮಾಡುವಂತೆ ನಿರ್ದೇಶಿಸಿದೆ.

ಈ ಹಿಂದೆ ಇಲ್ಲಿನ ಆಲೂರು ವೆಂಕಟರಾವ್‌ ವೃತ್ತದಿಂದ ಗಾಂಧಿನಗರದವರೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್‌ ಅರ್ಜಿಗಳನ್ನು ಏಕಸದಸ್ಯಪೀಠ ವಜಾಗೊಳಿಸಿತ್ತು.ನ್ಯಾಯಾಂಗ ನಿಂದನಾ ಅರ್ಜಿ ಕೂಡಾ ವಜಾ:  ಸಮರ್ಪಕ ಕಾನೂನು ಪ್ರಕ್ರಿಯೆ ಪಾಲಿಸದೆ ಕಾಂಪೌಂಡ್‌ ಗೋಡೆ ಒಡೆದಿರುವುದು ಹಾಗೂ ಎದುರಿಗಿದ್ದ ಮರಗಳನ್ನು ಕಡಿಯುವ ಮೂಲಕ ಬಿಆರ್‌ಟಿಎಸ್‌ ನ್ಯಾಯಾಂಗ ನಿಂದನೆ ಮಾಡಿದೆ ಎಂದು ದೂರಿ ವೆಂಕಟೇಶ ಬೆಡಗಬೆಟ್ಟು ಎನ್ನುವವರು ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿಯನ್ನು ಕೂಡಾ ವಿಭಾಗೀಯ ಪೀಠ ವಜಾಗೊಳಿಸಿತು.   ಬಿಆರ್‌ಟಿಎಸ್‌ ಪರವಾಗಿ ಸಿ.ವಿ.ಅಂಗಡಿ, ಸರ್ಕಾರದ ಪರವಾಗಿ ಸಿ.ಎಸ್‌.ಪಾಟೀಲ ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.