ADVERTISEMENT

ರೈತರಿಂದ ಆಮರಣ ಉಪವಾಸ ಆರಂಭ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 5:03 IST
Last Updated 11 ಸೆಪ್ಟೆಂಬರ್ 2017, 5:03 IST
ನವಲಗುಂದದಲ್ಲಿ ಪಕ್ಷಾತೀತ ಹೋರಾಟ ಸಮಿತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದು
ನವಲಗುಂದದಲ್ಲಿ ಪಕ್ಷಾತೀತ ಹೋರಾಟ ಸಮಿತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದು   

ನವಲಗುಂದ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಸರ್ವ ಪಕ್ಷದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಆಡಳಿ ತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದ ಬಿಜೆಪಿ ನುಡಿದಂತೆ ನಡೆದು ಕೊಳ್ಳಲಿಲ್ಲ ಎಂದು ಖಂಡಿಸಿ ಭಾನುವಾರ ದಿಂದ ಏಳು ರೈತರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಗೋವಾ ಹಾಗೂ ಮಹಾರಾಷ್ಟ್ರದ ವಿರೋಧ ಪಕ್ಷದವರ ಮನವೊಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಲಿನ ಆಡಳಿತ ಪಕ್ಷದವರ ಮನವೊಲಿಸುವುದಾಗಿ ಬಿಜೆಪಿ ಮುಖಂ ಡರು ಸರ್ವ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು. ಆದರೆ ಈತನಕ ಆ ಕೆಲಸಮಾಡದೇ ಕಾಲಹರಣ ಮಾಡುತ್ತಿದ್ದಾರೆಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.  

‘ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಕಳೆದ ಬಾರಿ ಆಮರಣ ಉಪವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಹಾಗೂ ಸರ್ವ ಪಕ್ಷದ ಸಭೆಗೆ ನಿಮ್ಮನ್ನು ಆಹ್ವಾನಿಸುವುದಾಗಿ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗಿತ್ತು.  

ADVERTISEMENT

ಆದರೆ ಸರ್ವ ಪಕ್ಷದ ಸಭೆಗೆ ನಮ್ಮನ್ನು ಆಹ್ವಾನಿಸದೇ ರೈತಕುಲಕ್ಕೆ ಅವಮಾನ ಮಾಡಿದರು. ಅಲ್ಲದೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲಾರಾದ ಕಾರಣ ಅಮರಣ ಉಪವಾಸ ಸತ್ಯಾಗ್ರಹ ಅನಿವಾರ್ಯವಾಯಿತು’ ಎಂದು ಪಕ್ಷಾತೀತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.

‘ಬಿಜೆಪಿಯವರು ಕೂಡ ಕಳಸಾ ಬಂಡೂರಿ ಯೋಜನೆಗಾಗಿ ತುರ್ತು 7.5 ಟಿ.ಎಂ.ಸಿ ನೀರನ್ನು ಬಿಡುಗಡೆಗಾಗಿ ಒಮ್ಮೆಯೂ ರಾಜ್ಯಾದ್ಯಂತ ಹೋರಾಟ ಮಾಡಲಿಲ್ಲ.  ಆದರೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಲಕ್ಷಾಂತರ ಜನರನ್ನು ಸೇರಿಸಿ ಬೈಕ್ ರ್‌್ಯಾಲಿ ಹಮ್ಮಿ ಕೊಂಡ ಉದ್ದೇಶವಾದರು ಏನು’ ಎಂದು ಅವರು  ಪ್ರಶ್ನಿಸಿದರು. 

ಮನಸೂರಿನ ಬಸವರಾಜ ದೇವರು  ಮಾತನಾಡಿ ‘ಸರ್ವ ಪಕ್ಷದ ಸಭೆ ನಡೆದಾಗ ನಾನು ವಿಧಾನಸೌಧದಲ್ಲಿಯೇ ಇದ್ದೆ. ಕಳಸಾ ಬಂಡೂರಿ ವಿಷಯವಾಗಿ ನಡೆದ ಚರ್ಚೆಯಲ್ಲಿ  ಆಡಳಿತ ಹಾಗೂ ವಿರೋಧ ಪಕ್ಷದವರು ನೀಡಿದ ಭರವಸೆಯಿಂದ ಸಂತೋಷಗೊಂಡಿದ್ದೆ. ಆದರೆ ಇವರು ರೈತರಿಗೆ ಮೋಸ ಮಾಡುತ್ತಾರೆಂದು ಅಂದು ಕೊಂಡಿರಲಿಲ್ಲ. ಈಗಲಾದರೂ ಒಂದು ವಾರ ದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸ ದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ಇದಕ್ಕೂ ಮೊದಲು ಪಕ್ಷಾತೀತ ಹೋರಾಟ ಸಮಿತಿಯವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರಣಿಗೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಬಿಜೆಪಿ ಮುಖಂಡರಾದ ಎ.ಎಸ್.ಬಾಗಿ, ಈರಣ್ಣಾ ಚವಡಿ, ರಾಯನಗೌಡ ಪಾಟೀಲ ಅವರ ಮನೆ ಮುಂದೆ ಹಾಗೂ ಪುರಸಭೆಯ ಬಿಜೆಪಿ ಸದಸ್ಯ ಶ್ರೀಕಾಂತ ಪಾಟೀಲರ ಅಂಗಡಿಯ ಮುಂದೆ ಧರಣಿ ನಡೆಸಿ ಸಂಸದ ಪ್ರಹ್ಲಾದ ಜೋಶಿ ಹಾಗೂ ವಿರೋಧ ಪಕ್ಷದ ನಾಯಕ ಜಗೀಶ ಶೆಟ್ಟರ್ ಮೇಲೆ ಒತ್ತಡ ಹಾಕುವಂತೆ ಆಗ್ರಹಿಸಿದರು.

ಶಾಸಕ ಕೋನರಡ್ಡಿ ವಿರುದ್ಧ ಮಾತಿನ ಚಕಮಕಿ: ಆಮರಣ ಉಪವಾಸ ಕೈಗೊಂಡಿರುವ ಸುದ್ದಿ ತಿಳಿದ ಶಾಸಕ ಕೋನರಡ್ಡಿ ಸಂಜೆ ವೇಳೆಗೆ ಹೋರಾಟದ ವೇದಿಕೆಗೆ ಬಂದರು. ‘ತಮ್ಮ ಪರವಾಗಿ ನಾನು ಕೂಡ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಸದಾ ನಾನಿರುತ್ತೇನೆ. ಎಂತಹ ಹೋರಾಟಕ್ಕೂ ನಾನು ಸಿದ್ಧ’ ಎಂದು ಅಭಯ ನೀಡಿದರು. ಆಗ ಹೋರಾಟ ಗಾರರು ಮತ್ತು ಶಾಸಕ ಕೋನರಡ್ಡಿ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

ಸತ್ಯಾಗ್ರಹ ನಿರತ ರೈತರು
ಬೆನ್ನಪ್ಪ ಕುರುಹಟ್ಟಿ, ರವಿಗೌಡ ಪಾಟೀಲ, ಸಂಗಪ್ಪ ನಿಡವಣಿ, ಬಸಯ್ಯ ಮಠಪತಿ, ಶಿವಪ್ಪ ಸಂಗಟಿ, ಯಲ್ಲಪ್ಪ ದಾಡಿಬಾವಿ, ಹುಸೇನಸಾಬ್ ನದಾಫ ಉಪವಾಸ ಸತ್ಯಾಗ್ರಹ ಕೈಗೊಂಡವರಾಗಿದ್ದಾರೆ. ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ವೈದ್ಯಕೀಯ ತಪಾಸಣೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿ.ಪಿ.ಐ ಪಿ.ಎಂ.ದಿವಾಕರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.