ADVERTISEMENT

‘ವಂತಿಗೆ’ ಹಾವಳಿ ತಡೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:10 IST
Last Updated 17 ಮೇ 2017, 7:10 IST

ಧಾರವಾಡ:  ಶಾಲಾ, ಕಾಲೇಜುಗಳಲ್ಲಿ ವಂತಿಗೆ ಹಾವಳಿ ತಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಧಿಕಾರಿ ಕಚೇರಿ ಎದುರು ಮಂಗಳವಾರ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಸ್ಥಿತಿವಂತರೂ, ಅಧಿಕಾರಿಗಳ ಮಕ್ಕಳು ಎಸ್‌ಎಸ್‌್ಎಲ್‌ಸಿ, ಪಿಯುಸಿಗೆ ಹಣ ನೀಡಿ ಪ್ರವೇಶ ಪಡೆಯುತ್ತಾರೆ. ಆದರೆ, ಗ್ರಾಮೀಣ ರೈತರ ಮಕ್ಕಳು ಮತ್ತು ನಗರದ ಬಡ, ಕೊಳೆಗೇರಿ ಮಕ್ಕಳು ದುಬಾರಿ ಶುಲ್ಕ ಮತ್ತು ವಂತಿಗೆ ನೀಡಲು ಆಗುವುದಿಲ್ಲ. ಆದ್ದರಿಂದ ವಂತಿಗೆ ಪಡೆಯುವುದನ್ನು ತಡೆಯಲು ಅಧಿಕಾರಿಗಳು ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಬರುತ್ತಿರುವ ಕಾರಣ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದಂತಾಗಿದೆ. ಕೆಲ ಕಾಲೇಜುಗಳಲ್ಲಿ ಪ್ರಾಚಾರ್ಯರು ಮತ್ತು ಅಲ್ಲಿಯ ಸಿಬ್ಬಂದಿ ಶುಲ್ಕದ ಆಸೆಯಿಂದ ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಧಾರವಾಡ ‘ವಿದ್ಯಾ ಕಾಶಿ’ ಎಂಬ ಹೆಸರಿಗೆ ಕಪ್ಪು ಮಸಿ ಬಳಿಯಲಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ವಂತಿಗೆ ಹಾವಳಿ ತಡೆಯಬೇಕು. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಜೂನ್‌ನಲ್ಲಿ ನಡೆಯುವ ಪ್ರವೇಶದ ಸಂದರ್ಭದಲ್ಲಿ ಶೇ 50ರಷ್ಟು ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವಂತೆ  ಸೂಚಿಸಬೇಕು ಎಂದು ಒತ್ತಾಯಿಸಿದರು.

ಶಹರ ಘಟಕದ ಅಧ್ಯಕ್ಷ ಸುರೇಶ ಹಿರೇಮಠ, ಮುಖಂಡರಾದ ಗುರುರಾಜ ಹುಣಸಿಮರದ, ಬಸವರಾಜ ಭಜಂತ್ರಿ, ದೇವರಾಜ ಕಂಬಳಿ, ಶಾಂತವೀರ ಬೆಟಗೇರಿ, ಭೀಮಪ್ಪ ಕಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.