ADVERTISEMENT

ವಾಯವ್ಯ ಸಾರಿಗೆಯ ಹೊಸ ಹಾದಿ ‘ಬಸ್‌ ದಿನ’

ಬಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣ ಇಂದು

ಬಸವರಾಜ ಸಂಪಳ್ಳಿ
Published 20 ಜುಲೈ 2017, 10:05 IST
Last Updated 20 ಜುಲೈ 2017, 10:05 IST

ಹುಬ್ಬಳ್ಳಿ: ‘ಸಮೂಹ ಸಾರಿಗೆ ಬಳಸಿ, ಜಾಗತಿಕ ತಾಪಮಾನ ಇಳಿಸಿ’ ಎಂಬ ಘೋಷಣೆಯೊಂದಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಗುರುವಾರ (ಜುಲೈ 20) ಹುಬ್ಬಳ್ಳಿ–ಧಾರವಾಡದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ‘ಬಸ್‌ ದಿನ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 12ಕ್ಕೆ ‘ಬಸ್‌ ದಿನ’ಕ್ಕೆ ಚಾಲನೆ ನೀಡಿದ ಬಳಿಕ ಅಲ್ಲಿಂದಲೇ ಧಾರವಾಡಕ್ಕೆ ಮುಖ್ಯಮಂತ್ರಿ ಬಸ್‌ನಲ್ಲಿ ತೆರಳಲಿದ್ದಾರೆ. ಅವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಸ್‌ನಲ್ಲಿ ಪ್ರಯಾಣಿಸಲಿದ್ದಾರೆ. ಸಂಜೆ 4.30ಕ್ಕೆ ಅದೇ ಬಸ್ಸಿನಲ್ಲಿ ಧಾರವಾಡದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

‘ಬಸ್‌ ದಿನ’ದ ವಿಶೇಷ: ಪ್ರಥಮ ಬಾರಿಗೆ ಬಸ್‌ ದಿನ ಆಯೋಜನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ‘ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಸಮೂಹ ಸಾರಿಗೆ ಬಳಿಸಿದರೆ ಆಗುವ ಪರಿಸರದ ಲಾಭಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬಸ್‌ ದಿನ’ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಈ ದಿನದಂದು ಸಾರ್ವಜನಿಕರು, ಸರ್ಕಾರಿ ನೌಕರರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಸಂಸ್ಥೆಗಳ ನೌಕರರು ಹಾಗೂ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ನೌಕರರು, ಕಾರ್ಮಿಕರು ಸಂಸ್ಥೆಯ ಬಸ್‌ಗಳಲ್ಲಿ  ಪ್ರಯಾಣಿಸುವ ಕಾರ್ಯಕ್ರಮ ಇದಾಗಿದೆ’ ಎಂದು ಹೇಳಿದರು.

‘ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಪ್ರತಿ ದಿನ ಎರಡು ಲಕ್ಷ ಜನರು 350 ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಸಂಖ್ಯೆ ಮೂರು ಲಕ್ಷ ಆಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ’. ಅಂದು ವಿವಿಧ ಮಾರ್ಗಗಳಿಗೆ ಹೆಚ್ಚುವರಿಯಾಗಿ 100 ಬಸ್‌ಗಳನ್ನು ಓಡಿಸಲಾಗುವುದು ಎಂದು ಹೇಳಿದರು.

ಉತ್ತಮ ಸ್ಪಂದನೆ: ಸಂಘ, ಸಂಸ್ಥೆಗಳು, ಶಾಲಾ, ಕಾಲೇಜು ಹಾಗೂ ಸಾಹಿತಿಗಳು, ಜನಪ್ರತಿನಿಧಿಗಳಿಂದ ‘ಬಸ್‌ ದಿನ’ಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಸದಾನಂದ ಡಂಗನವರ ತಿಳಿಸಿದರು.

ಆಗಸ್ಟ್‌ 20 ರಂದು ಬೆಳಗಾವಿ ನಗರದಲ್ಲಿ ‘ಬಸ್‌ ದಿನ’ ಆಚರಿಸಲಾಗುವುದು. ಬಳಿಕ ಪ್ರತಿ ತಿಂಗಳ 20ರಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲೂ ‘ಬಸ್‌ ದಿನ’ ಆಚರಿಸಲಾಗುವುದು ಎಂದು ಹೇಳಿದರು.

**

ಪ್ರತಿಯೊಬ್ಬರು ಬಸ್ಸಿನಲ್ಲಿ ಸಂಚರಿಸಿದರೆ ಇಂಧನ ಉಳಿಸಬಹುದು ಜೊತೆಗೆ ಹಣವೂ ಉಳಿಯುತ್ತದೆ. ರಸ್ತೆ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ
ಧರಣೇಂದ್ರ ಬಿ.ಜವಳಿ
ಅಧ್ಯಕ್ಷ, ಸಿದ್ಧಾರೂಢಸ್ವಾಮಿ ಮಠ ಟ್ರಸ್ಟ್‌

**

‘ಬಸ್ ದಿನ’ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಎಷ್ಟು ಸಾಧ್ಯವೋ ಅಷ್ಟು ದಿನ ಬಸ್‌ ಗಳಲ್ಲಿ ಸಂಚರಿಸಬೇಕು.  ಬಸ್‌ ದಿನ ಆಯೋಜಿಸಿರುವುದು ಸ್ವಾಗತಾರ್ಹ

ಮನೋಹರ ಕೊಟ್ಟೂರಶೆಟ್ಟರ
ಅಧ್ಯಕ್ಷ, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ನಾರ್ತ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.