ADVERTISEMENT

ವ್ಯಾಪಾರ, ವಾಹನ ನಿಲುಗಡೆಗೆ ಮತ್ತೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:46 IST
Last Updated 23 ಏಪ್ರಿಲ್ 2017, 5:46 IST

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಹಣ್ಣು ಮಾರಾಟ ಮತ್ತು ವಾಹನ ನಿಲುಗಡೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಶನಿವಾರದಿಂದ ತೆರವುಗೊಳಿಸಲಾಗಿದೆ. ಮೈದಾನದ ನವೀಕರಣ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಮಹಾನಗರ ಪಾಲಿಕೆ ಮೇಯರ್‌ ಡಿ.ಕೆ.ಚವ್ಹಾಣ ಮತ್ತು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಭೇಟಿ ಮಾಡಿದ ವ್ಯಾಪಾರಸ್ಥರು, ಹಣ್ಣಿನ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮೈದಾನದ ಪಕ್ಕದಲ್ಲಿ ರಸ್ತೆ ಬದಿ ವ್ಯಾಪಾರ ಮಾಡಿದರೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಅಲ್ಲದೇ, ರಸ್ತೆಯಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದಕ್ಕೆ ಹಣ್ಣು ಖರೀದಿಗೆ ಗ್ರಾಹಕರು ಬರುತ್ತಿಲ್ಲ ಎಂದು ಅಲವತ್ತುಕೊಂಡರು.ಮಾರುಕಟ್ಟೆಗೆ ಸದ್ಯ ಮಾವು ಮತ್ತು ಹಲಸಿನ ಹಣ್ಣು ಹೇರಳವಾಗಿ ಬರುತ್ತಿದೆ. ಈ ಸಂದರ್ಭದಲ್ಲಿ ನಾವು ವ್ಯಾಪಾರ ಮಾಡದಿದ್ದರೆ ಕುಟುಂಬ ನಡೆಸುವುದು ಕಷ್ಟವಾಗುತ್ತದೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಮೇಯರ್ ಮತ್ತು ಆಯುಕ್ತರು, ಈದ್ಗಾ ಮೈದಾನದೊಳಗೆ ಹಣ್ಣಿನ ವ್ಯಾಪಾರಕ್ಕೆ ಮತ್ತು ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟರು.

ಅಸಮಾಧಾನ: ಈದ್ಗಾ ಮೈದಾನ ನವೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಮೇಯರ್‌ ಅಸಮಾಧಾನ ವ್ಯಕ್ತಪಡಿಸಿದರು.  ತ್ವರಿತವಾಗಿ ಕಾಮಗಾರಿ ಮುಗಿಸದ ಗುತ್ತಿಗೆದಾರರಿಗೆ ನೋಟಿಸ್‌ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲ ಆರಂಭವಾಗುವುದರೊಳಗಾಗಿ ಕಾಮಗಾರಿ ಮುಗಿಸುವಂತೆ ಆದೇಶಿಸಿದರು. ₹1 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ADVERTISEMENT

ಶೀಘ್ರ ಪೂರ್ಣಕ್ಕೆ ಕ್ರಮ:  ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 6 ತಿಂಗಳು ಅವಕಾಶ ನೀಡಲಾಗಿದೆ. ಈಗಾಗಲೇ ಕಾಮಗಾರಿ ಕೈಗೊಂಡು ಮೂರು ತಿಂಗಳಾಗಿದೆ. ಶೀಘ್ರ ಮುಗಿಸಲು ಕ್ರಮಕೈಗೊಳ್ಳುವುದಾಗಿ ಎಂದು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.ಪಾಲಿಕೆ ಸದಸ್ಯ ಸುಧೀರ್‌ ಸರಾಫ್‌, ಮುಖ್ಯ ಎಂಜಿನಿಯರ್‌ ಡಿ.ಎಸ್‌.ಮದ್ಲಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಮಲಾ ಕಾಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.