ADVERTISEMENT

‘ಸಾಹಿತ್ಯದಲ್ಲಿ ಲೋಕಾನುಭವದ ಮಹತ್ವ ಸಾರಿದ ಅಕ್ಕಮಹಾದೇವಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:16 IST
Last Updated 17 ಏಪ್ರಿಲ್ 2017, 6:16 IST

ಧಾರವಾಡ: ಮಹಿಳೆಯರಿಗೆ ಧಾರ್ಮಿಕ ಹಾಗೂ ಸಮಾನತೆಯ ಸ್ವಾತಂತ್ರ ಕೊಡಿಸುವ ನಿಟ್ಟಿನಲ್ಲಿ ವಚನ ಸಾಹಿತ್ಯದಲ್ಲಿ ವೈಚಾರಿಕತೆ, ನೈತಿಕತೆ ಮತ್ತು ಲೋಕಾನುಭವದ ಬೀಜ ಬಿತ್ತಿ ಅಕ್ಕಮಹಾದೇವಿ ಮೊದಲ ಕವಯಿತ್ರಿ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ ಜಿಲ್ಲಾ ಘಟಕ ಮತ್ತು ಜಿಲ್ಲಾ ಮಹಿಳಾ ಕದಳಿ ವೇದಿಕೆ ವತಿಯಿಂದ ಇಲ್ಲಿನ ಮುರಘಾಮಠದಲ್ಲಿ ಭಾನುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶರಣ ಚಳುವಳಿಯಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ಕನ್ನಡದ ಮೊದಲ ಕವಯಿತ್ರಿಯಾದ ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಆಡಂಬರ ವೈಭವ ಸಂಪತ್ತಿನ ಜೀವನವನ್ನು ತೊರೆದು ಅನುಭವ ಮಂಟಪಕ್ಕೆ ಸೇರಿಕೊಂಡು ಮಹಾಶರಣೆ ಎಂದೆನಿಸಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನದೊಂದಿಗೆ ಧಾರ್ಮಿಕ ಸಂಸ್ಕಾರದತ್ತ ಪ್ರಭಾವಿತಳಾಗಿ ಜಗತ್ತಿಗೆ ಮಾದರಿಯಾಗಿದ್ದಾಳೆ. ಅನುಭವ ಮಂಟಪದ ಪ್ರತಿಯೊಬ್ಬ ಶರಣರ ವಚನ ಸಾಹಿತ್ಯ ಓದುವುದರ ಜತೆಗೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಇತ್ತೀಚೆಗೆ ಮಕ್ಕಳ ಜೊತೆಗೆ ಪಾಲಕರು ಕೂಡ ಧಾರ್ಮಿಕ ಸಂಪ್ರದಾಯ ಮರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ’ ಎಂದರು.

‘ಪಾಲಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಪೂಜೆ, ಪ್ರಾರ್ಥನೆ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳ ತಿಳಿವಳಿಕೆ ನೀಡಬೇಕು. ಬಸವಾದಿ ಶರಣರು ನೀಡಿದ ಸಾಹಿತ್ಯದ ಮೌಲ್ಯಗಳು ನಮ್ಮ ಬದುಕಿಗೆ ದಾರಿದೀಪವಾಗಿದ್ದು, ಇದನ್ನು ಅರಿತುಕೊಂಡು ನುಡಿದಂತೆ ನಡೆಯಬೇಕು’ ಎಂದು ಅವರು ಸಲಹೆ ನೀಡಿದರು.ಡಾ.ರೇಣುಕಾ ಅಮಲಜರಿ ಅವರು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ನಂತರದಲ್ಲಿ ವೈಷ್ಣವಿ, ದಿವ್ಯಾ ಕೋಳಕೂರ ಅವರಿಂದ ವಚನ ನೃತ್ಯ ಜರುಗಿತು.

ADVERTISEMENT

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶಂಭುಲಿಂಗ ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು. ದಾಕ್ಷಾಯಿಣಿ ಬಸವರಾಜ, ಸತೀಶ ತುರಮರಿ, ಲೀಲಾ ಕಲಕೋಟಿ, ಸವಿತಾ ಅಮರಶೆಟ್ಟಿ, ವೀರಣ್ಣ ವಡ್ಡೀನ, ಶ್ರೀಶೈಲ ರಾಚಣ್ಣವರ, ಮಹಾಂತೇಶ ನರೆಗಲ್, ಶಾಂತವೀರ ಬೆಟಗೇರಿ, ಸವಿತಾ ನಡಕಟ್ಟಿ, ಶಾರದಾ ಕೌದಿ, ಬಸವಂತಿ ಇಂಗಳಹಳ್ಳಿ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.