ADVERTISEMENT

98ರ ‘ಪಾಪು’ಗೆ ಜನ್ಮದಿನದ ಅಭಿನಂದನೆ

ಸ್ವಾಮೀಜಿ, ರಾಜಕಾರಣಿ, ಸಾಹಿತಿಗಳಿಂದ ಗೌರವ ನುಡಿ; ಶತಕ ದಾಟಲಿ ಎಂದು ಶುಭ ಹಾರೈಸಿದ ಗಣ್ಯರು, ಶ್ರೀಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 5:32 IST
Last Updated 31 ಜನವರಿ 2017, 5:32 IST
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಾಹಿತ್ಯ ಭಂಡಾರದ ಎಂ.ಎ.ಸುಬ್ರಹ್ಮಣ್ಯ, ತೋಂಟದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸಾಹಿತಿ ಹಂಪ ನಾಗರಾಜಯ್ಯ ಇದ್ದಾರೆ
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಾಹಿತ್ಯ ಭಂಡಾರದ ಎಂ.ಎ.ಸುಬ್ರಹ್ಮಣ್ಯ, ತೋಂಟದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸಾಹಿತಿ ಹಂಪ ನಾಗರಾಜಯ್ಯ ಇದ್ದಾರೆ   

ಹುಬ್ಬಳ್ಳಿ: ಹಿರಿಯ ಪರ್ತಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಪಾಟೀಲ ಪುಟ್ಟಪ್ಪ ಅವರ 98ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಸ್ವಾಮೀಜಿ, ರಾಜಕಾರಣಿಗಳು ಮತ್ತು ಸಾಹಿತಿಗಳು ಗೌರವದ ನುಡಿ ಮೂಲಕ ಅಭಿನಂದನೆ ಸಲ್ಲಿಸಿದರು.

ನಗರದ ಡಾ.ಪಾಟೀಲ ಪುಟ್ಟಪ್ಪ ವಿಚಾರ ವೇದಿಕೆ ಹಾಗೂ ಅವ್ವ ಸೇವಾ ಟ್ರಸ್ಟ್ ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಪು ಹೋರಾಟದ ಪ್ರಪಂಚ ಅನಾವರಣಗೊಂಡಿತು.

ಸಾನ್ನಿಧ್ಯ ವಹಿಸಿದ್ದ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ‘ರಾಜಕಾರಣಿಗಳು ಜಢವಾಗಿದ್ದು ಕೇವಲ ನೌಕರಿ ಕೊಡಿಸುವುದು ಮತ್ತು ಬಡ್ತಿ ನೀಡುವುದು ಮಾತ್ರ ತಮ್ಮ ಕೆಲಸ ಎಂದು ತಿಳಿದುಕೊಂಡಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದರು. ‘ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡುವ ಮೈಸೂರು ಭಾಗದವರಲ್ಲಿ ಬದ್ಧತೆ ಇದೆ. ಅವರಿಗೆ ಕಾವೇರಿ ವಿಷಯದಲ್ಲಿ ಅರಿವು ಇದೆ. ಇಂಥ ಗುಣ ಉತ್ತರ ಕರ್ನಾಟಕ ಭಾಗದಲ್ಲಿ ಇಲ್ಲದ್ದರಿಂದ ಮಹಾದಾಯಿ ಹೋರಾಟಕ್ಕೆ ಫಲ ಸಿಗಲಿಲ್ಲ. ಪ್ರಧಾನಿ ಮೇಲೆ ಒತ್ತಡ ಹೇರಿ ಮಹಾದಾಯಿ ಸಮಸ್ಯೆಗೆ ಪರಿಹಾರ ಕಾಣಲು ಮುಂದಾ­ಗಬೇಕು’ ಎಂದು ಅವರು ವೇದಿಕೆ­ಯಲ್ಲಿದ್ದ ಜೆ.ಡಿ.ಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರನ್ನು ಕೋರಿದರು.

ಅಭಿನಂದನೆ ನುಡಿಗಳನ್ನಾಡಿದ ಸಾಹಿತಿ ಶಾಂತಿನಾಥ ದಿಬ್ಬದ ‘ರಾಜ್ಯದ ಸಾರ್ವಜನಿಕ ಕ್ಷೇತ್ರದಲ್ಲಿ ಪಾಟೀಲ ಪುಟ್ಟಪ್ಪ ಅವರು ಭೀಷ್ಮ ಇದ್ದಂತೆ. ಅನ್ಯಾಯದ ವಿರುದ್ಧ ಸಿಂಹಗರ್ಜನೆ ಮಾಡುವ ಅವರು ಅಗಾದ ನೆನಪಿನ ಶಕ್ತಿ ಮೂಲಕ ವಿಸ್ಮಯ ಮೂಡಿಸಿದ್ದಾರೆ’ ಎಂದರು. ‘ಪಾಟೀಲ ಪುಟ್ಟಪ್ಪ ಅವರ ಸಾಹಿತ್ಯ ಕೃತಿಗಳ ಗಂಭೀರ ಅಧ್ಯಯನ ಆಗಲಿಲ್ಲ. ವಿಮರ್ಶಕರು ಮತ್ತು ವಿಶ್ವ­ವಿದ್ಯಾಲಯಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದು  ಹೇಳಿದರು.

ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ ‘ಕೃಷ್ಣ ತನ್ನ ಬಾಯಲ್ಲಿ ಬ್ರಹ್ಮಾಂಡ ತೋರಿಸಿದಂತೆ, ಪಾಟೀಪ ಪುಟ್ಟಪ್ಪ ಅವರು ಬಾಯಿ ತೆರೆದರೆ ಸಮಗ್ರ ಕರ್ನಾಟಕದ ಚಿತ್ರಣ ಕಾಣುತ್ತದೆ. ಅವರು ಕನ್ನಡ ಸೇವೆಯ ಜೊತೆಯಲ್ಲಿ ರಾಷ್ಟ್ರಪ್ರೇಮದ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದ್ದಾರೆ’ ಎಂದು ಹಂಪನಾ ಹೇಳಿದರು.

‘ಪಾಟೀಪ ಪುಟ್ಟಪ್ಪ ಅವರು ದೈಹಿಕವಾಗಿ ಬಳಲಿದ್ದರೂ ಮಾನಸಿಕವಾಗಿ ಸದೃಢರಾಗಿದ್ದಾರೆ. ಅವರ ನೂರನೇ ಜನ್ಮದಿನದ ಸಂಭ್ರಮಕ್ಕೆ ಅವ್ವ ಸೇವಾ ಟ್ರಸ್ಟ್ ನೇತೃತ್ವ ವಹಿಸಲಿದೆ’ ಎಂದು ಟ್ರಸ್ಟ್ ಸ್ಥಾಪಕ ಬಸವರಾಜ ಹೊರಟ್ಟಿ ಹೇಳಿದರು. ಸಾಹಿತ್ಯ ಭಂಡಾರದ ಎಂ.ಎ.ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.