ADVERTISEMENT

ಹುಬ್ಬಳ್ಳಿ | ನಿಯಂತ್ರಣಕ್ಕೆ ಬಾರದ ದೂಳು

ನಾಗರಾಜ ಚಿನಗುಂಡಿ
Published 12 ಅಕ್ಟೋಬರ್ 2023, 3:11 IST
Last Updated 12 ಅಕ್ಟೋಬರ್ 2023, 3:11 IST
   

ಹುಬ್ಬಳ್ಳಿ: ನಗರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯಲಿಲ್ಲ. ದೂಳಿನ ಸಮಸ್ಯೆ ನಿವಾರಣೆಯಾಗಲಿಲ್ಲ. ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಕೈಗೆ ನಿಲುಕದ ಕಡೆಗಳಲ್ಲಿ ರಾಶಿ ಬಿದ್ದಿರುವ ಕೊಳೆ ಹಾಗೇ ಉಳಿದಿದೆ.

ರಸ್ತೆಗಳ ಅಂಚುಗಳಲ್ಲಿ ಹಾಗೂ ಕಚ್ಚಾರಸ್ತೆಗಳಲ್ಲಿ ಸಡಿಲಗೊಂಡ ಮಣ್ಣು ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆನೀರಿನಲ್ಲಿ ಬೆರೆತು ಪ್ರತಿವರ್ಷ ಕೊಚ್ಚಿ ಹೋಗುತ್ತಿತ್ತು. ಚರಂಡಿಗಳಲ್ಲಿ ಹಾಗೂ ರಾಜಕಾಲುವೆಯಲ್ಲಿ ಉರುಳಾಗಿ ಬಿದ್ದಿರುವ ಘನ ತ್ಯಾಜ್ಯವೂ ಕೊಚ್ಚಿ ಹೋಗುತ್ತಿತ್ತು. ಖಾಲಿ ಜಾಗಗಳಲ್ಲಿ ಬಿಸಾಡಿದ ಕಲ್ಮಶಗಳಿಂದ ಹೊಮ್ಮುವ ದುರ್ನಾತವನ್ನು ಕೂಡಾ ಮಳೆಗಾಲ ದೂರ ಮಾಡುತ್ತಿತ್ತು. ಆದರೆ, ಈ ವರ್ಷದ ಮಳೆಗಾಲ ಹುಬ್ಬಳ್ಳಿಯಲ್ಲಿ ಹೊಸತನ ಇನ್ನೂ ಹರಡಿಲ್ಲ. ಬಿದ್ದಿರುವ ತ್ಯಾಜ್ಯವೆಲ್ಲವೂ ಮತ್ತಷ್ಟು ದುರ್ನತ ಹರಡುತ್ತಿದೆ.

ತುಂತುರು ಮಳೆ ಹಾಗೂ ಅಲ್ಪ ಕಾಲ ಸುರಿದ ಮಳೆಯಿಂದ ಸಮಸ್ಯೆಗಳು ಹೆಚ್ಚಾಗಿವೆ. ರಸ್ತೆ ಪಕ್ಕದಲ್ಲಿದ್ದ ಘನತ್ಯಾಜ್ಯ ಹಾಗೂ ಸಡಿಲಗೊಂಡ ಮಣ್ಣೆಲ್ಲವೂ ರಸ್ತೆಗಳಲ್ಲಿ ಆವರಿಸಿಕೊಳ್ಳುತ್ತಿದೆ. ಸಣ್ಣದಾಗಿ ಸುರಿಯುವ ಮಳೆಗೆ ಪಕ್ಕಾ ರಸ್ತೆಗಳಲ್ಲಿಯೂ ಕೆಸರು ಯಥೇಚ್ಛವಾಗಿ ಹರಡಿಕೊಳ್ಳುತ್ತಿದೆ. ಇದು ಭಾರಿ ವಾಹನಗಳ ಚಕ್ರಗಳಲ್ಲಿ ಸಿಲುಕಿ ಊರೆಲ್ಲವೂ ಪಸರಿಸಿಕೊಳ್ಳುತ್ತಿದೆ. ಮಳೆ ಸ್ಥಗಿತವಾದ ಮರುದಿನವೇ ಕೆಸರೆಲ್ಲವೂ ಧೂಳಾಗಿ ಪರಿವರ್ತನೆ ಆಗಿ ಸಾರ್ವಜನಿಕರಿಗೆ ಸಂಕಷ್ಟ ತಂದೊಡ್ಡಿದೆ. ದಿನ ಕಳೆದಂತೆ ಹುಬ್ಬಳ್ಳಿಯ ಬಹುತೇಕ ಎಲ್ಲ ರಸ್ತೆಗಳಲ್ಲಿಯೂ ಧೂಳಿನ ಗೋಳು ಹೆಚ್ಚಾಗುತ್ತಿದೆ. 

ADVERTISEMENT

ರಸ್ತೆಯಲ್ಲಿ ಹರಡಿದ ಧೂಳು ಹಾಗೂ ಇತರೆ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಯಾಂತ್ರಿಕ ವ್ಯವಸ್ಥೆ ಇದ್ದರೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿಲ್ಲ. ತ್ಯಾಜ್ಯ ವಿಲೇವಾರಿಗೆ ಕೋಟಿಗಟ್ಟಲೇ ಪಾಲಿಕೆಯಿಂದ ಅನುದಾನ ವೆಚ್ಚವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡುವ ಮೂಲ ಉದ್ದೇಶ ಇನ್ನೂ ಈಡೇರಿಲ್ಲ ಎನ್ನುವುದು ವಾಸ್ತವದಲ್ಲಿ ಕಾಣುತ್ತಿದೆ.

ಪ್ರತಿವರ್ಷ ಮಳೆಗಾಲವು ಹುಬ್ಬಳ್ಳಿಯ ಕೊಳೆ ತೊಲಗಿಸುತ್ತಿತ್ತು. ಜನರು ಈಗಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಧೂಳು ಹಾಗೂ ಕೊಳೆ ಕಿತ್ತು ಹೋಗುವಂತಹ ಮಳೆ ಬರಬೇಕು ಎಂದು ಜನರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ. 

ಮಹಾ ನಗರದ ಸ್ವಚ್ಛತೆ ಕಾಪಾಡುವುದು ಪಾಲಿಕೆಯ ಜವಾಬ್ದಾರಿ ಆಗಿದ್ದರೂ, ಸ್ವಚ್ಛತೆ ಕಾಪಾಡುವುದಕ್ಕೆ ಅಗತ್ಯ ವ್ಯವಸ್ಥೆ ಅಳವಡಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.