ADVERTISEMENT

ಆನ್‌ಲೈನ್‌ ಜಾಹೀರಾತು ಹೆಸರಿನಲ್ಲಿ ವಂಚನೆ

ಪ್ರಜಾವಾಣಿ ಚಿತ್ರ
Published 5 ಮೇ 2022, 2:37 IST
Last Updated 5 ಮೇ 2022, 2:37 IST

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತಿನ ಮೊರೆ ಹೋದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ವಂಚಕನೊಬ್ಬ ₹40,500 ವಂಚಿಸಿದ್ದಾನೆ. ರಬ್ಬರ್ ಬ್ಯಾಂಡ್ ಮಾರಾಟಕ್ಕಿದೆ ಎಂದು ಫೇಸ್‌ಬುಕ್‌ನಲ್ಲಿದ್ದ ಜಾಹೀರಾತನ್ನು ಗಮನಿಸಿದ್ದ ವಿನೋದ ಎಂಬುವರು, ತಾನು ಖರೀದಿಸುವುದಾಗಿ ಹೇಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರು.

ನಂತರ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ವಂಚಕ, ನಿಮ್ಮ ಆರ್ಡರ್ ಕಳಿಸಲಾಗಿದೆ ಎಂದು ಪ್ಯಾಕ್ ಮಾಡಿದ ರಬ್ಬರ್ ಬ್ಯಾಂಡ್‌ಗಳ ಚಿತ್ರಗಳನ್ನು ಕಳಿಸಿದ್ದ. ನಿಜ ಎಂದು ನಂಬಿದ್ದ ವಿನೋದ ಅವರು ಆತನ ಖಾತೆಗೆ ಹಣ ಪಾವತಿಸಿದ್ದರು ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕುರಿಗಾಹಿ ಆತ್ಮಹತ್ಯೆ:

ADVERTISEMENT

ತಾಲ್ಲೂಕಿನ ಕಿರೇಸೂರಿನಲ್ಲಿ ಭೀಮಪ್ಪ ರಂಗಪ್ಪ ಯಂಡಿಗೇರಿ (30) ಎಂಬುವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಮಪ್ಪ ಅವರಿಗೆ ಸೇರಿದ ಸುಮಾರು 50 ಕುರಿಗಳು ಇತ್ತೀಚೆಗೆ ಮೃತಪಟ್ಟಿದ್ದವು. ಇದರಿಂದ ನೊಂದಿದ್ದ ಅವರು, ಗ್ರಾಮದ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಪರಾಧಿಗೆ ಶಿಕ್ಷೆ:

ಧಾರವಾಡದ ಹೈಕೋರ್ಟ್ ಪೀಠದಲ್ಲಿ ಕೆಲಸ ಕೊಡಿಸುವುದಾಗಿ,ಧಾರವಾಡದ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಹೆಸರಿನಲ್ಲಿ ನಕಲಿ ಸಹಿ ಮಾಡಿ ಆದೇಶ ಪತ್ರ ನೀಡಿದ್ದ ಶಂಕರಗೌಡ ಪಾಟೀಲ ಎಂಬಾತನಿಗೆ ನಗರದ ಎರಡನೇ ಜೆಎಂಎಫ್‌ಸಿ ಕೋರ್ಟ್ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.

ಅಪರಾಧಿ ಶಂಕರಗೌಡ ಕೆಲಸ ಕೊಡಿಸುವುದಾಗಿ ಹೇಳಿ ಕಳ್ಳೆಪ್ಪ ಮದೆಪ್ಪನವರ ಹಾಗೂ ರಾಮಪ್ಪ ಹೊರಟ್ಟಿ ಎಂಬುವರಿಂದ 2012ರಲ್ಲಿ ₹1.13 ಲಕ್ಷ ಪಡೆದಿದ್ದ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕರ್ನ ಸಿಂಗ್ ಆರ್.ಯು. ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೋವಿಂದಮ್ಮಾ ಬಾಲಯ್ಯ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.