ADVERTISEMENT

ಆದೇಶ ಬದಲಾಯಿಸಿ ರಾಜ್ಯ ಸರ್ಕಾರ; ಎಸ್‌.ಆರ್. ಹಿರೇಮಠ

ಗಣಿ ಲಾಬಿಗೆ ಮಣಿದ ಸಿದ್ದರಾಮಯ್ಯ, ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 11:07 IST
Last Updated 13 ಜುಲೈ 2018, 11:07 IST

ಹುಬ್ಬಳ್ಳಿ:ಜಿಂದಾಲ್ ಮತ್ತು ಬಲ್ಡೋಟಾ ಗಣಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಬದಲಿಸಿದ್ದು, ಇದರ ವಿರುದ್ಧ ಕೇಂದ್ರ ಉನ್ನತಾಧಿಕಾರ ಸಮಿತಿಗೆ ದೂರು ನೀಡಲಾಗಿದೆ ಎಂದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿರುವ ಎರಡು ಗಣಿಗಳನ್ನು ಮೇಲಿನ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಕಾರ್ತಿಕೇಯ ಹಾಗೂ ಪಾರ್ವತಿ ದೇವಸ್ಥಾನ (ಕುಮಾರಸ್ವಾಮಿ ದೇವಸ್ಥಾನ) ಈ ಗಣಿಗಳ ವ್ಯಾಪ್ತಿಯಲ್ಲಿದೆ ಎಂದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಐತಿಹಾಸಿಕ ಮಹತ್ವ ಇರುವ ದೇವಸ್ಥಾನಗಳ ಅಥವಾ ಸ್ಮಾರಕಗಳ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ ಎಂದು 1978ರಲ್ಲಿ ಆದೇಶ ಹೊರಡಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಅದನ್ನು ತಿದ್ದುಪಡಿ ಮಾಡಿ 300 ಮೀಟರ್‌ಗೆ ಇಳಿಸಿದ್ದಾರೆ. ಕುಮಾರಸ್ವಾಮಿ ಅವರು ಸಹ ಆ ಬಗ್ಗೆ ಕ್ರಮ ಕೈಗೊಳ್ಳದೆ ಗಣಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ADVERTISEMENT

ಅಕ್ರಮ ಗಣಿಗಾರಿಕೆ ಕಾರಣ ಸುಪ್ರೀಂ ಕೋರ್ಟ್‌ ಈ ಹಿಂದೆ ರದ್ದುಪಡಿಸಿದ್ದ 52 ಗಣಿಗಳಲ್ಲಿ ಸರ್ಕಾರ ಈಗ ಜಿಂದಲ್ ಹಾಗೂ ಬಲ್ಡೋಟಾ ಕಂಪೆನಿಗಳಿಗೆ ಹಂಚಿಕೆ ಮಾಡಿರುವ ಗಣಿಗಳು ಸೇರಿವೆ. ಸ್ಮಾರಕಗಳ ರಕ್ಷಣೆಯ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ನೀಡಿರುವ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎಂದು ಅವರು ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು, ಆದರೆ ಮುಖ್ಯಮಂತ್ರಿಯಾದ ನಂತರ ಲಾಬಿ ಮಣಿದಿದ್ದಾರೆ. ಅಕ್ರಮ ಗಣಿಗಾರಿಕೆ ತಡೆಯುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರೂ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದರು.

ವಿಎಚ್‌ಪಿ ಸಭೆಗಾಗಿ ರಾಜ್‌ಘಾಟ್ ಬಂದ್:

ವಿಶ್ವ ಹಿಂದೂ ಪರಿಷತ್ ಸಭೆಗೆ ತೊಂದರೆ ಆಗಲಿದೆ ಎಂಬ ಕಾರಣಕ್ಕೆ ಮಹಾತ್ಮ ಗಾಂಧೀಜಿ ಅವರ ಸ್ಮಾರಕವನ್ನು ಜೂನ್ 24 ಮತ್ತು 25ರಂದು ಬಂದ್ ಮಾಡಲಾಗಿತ್ತು. ಸ್ಮಾರಕ ಆರಂಭವಾದ ದಿನದಿಂದ ಇಲ್ಲಿಯ ವರೆಗೆ ಬಾಗಿಲು ಮುಚ್ಚಿರಲಿಲ್ಲ. ಒಂದು ಸಂಘಟನೆಗೆ ಅನುಕೂಲ ಮಾಡಿಕೊಡಲು ಈ ರೀತಿ ಮಾಡಿರುವ ಕ್ರಮಕ್ಕೆ ತೀವ್ರ ವಿರೋಧ ಇದೆ. ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.