ADVERTISEMENT

ಅಸಮರ್ಪಕ ನೀರು ಪೂರೈಕೆ: ಗ್ರಾಮಸ್ಥರಿಂದ ರಸ್ತೆ ತಡೆ

ಹಲವು ದಿನಗಳಿಂದ ನೀರಿಗಾಗಿ ಪರದಾಡುತ್ತಿರುವ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಸ್ಥ‌ರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 7:04 IST
Last Updated 20 ಏಪ್ರಿಲ್ 2018, 7:04 IST
ಸಮರ್ಪಕವಾಗಿ ನೀರು ಪೂರೈಸದಿರುವ ಕ್ರಮವನ್ನು ಖಂಡಿಸಿ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಸ್ಥರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು
ಸಮರ್ಪಕವಾಗಿ ನೀರು ಪೂರೈಸದಿರುವ ಕ್ರಮವನ್ನು ಖಂಡಿಸಿ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಸ್ಥರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದರು   

ಮುಂಡರಗಿ: ಕಳೆದ ಹಲವು ದಿನಗಳಿಂದ ಗ್ರಾಮ ಪಂಚಾಯ್ತಿಯವರು ಗ್ರಾಮಸ್ಥರಿಗೆ ಸಮರ್ಪಕವಾಗಿ ನೀರು ಪೂರೈಸದಿರುವ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮಸ್ಥರು ಗುರುವಾರ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರೆಲ್ಲ ಹೆದ್ದಾರಿಯನ್ನು ದಿಢೀರ್ ಬಂದ್ ಮಾಡಿದ್ದರಿಂದ ವಾಹನ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

‘ಕೊರ್ಲಹಳ್ಳಿ ಗ್ರಾಮವು ತುಂಗಭದ್ರಾ ನದಿ ದಂಡೆಯ ಮೇಲಿದ್ದರೂ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಳಕೆಗೆ ಹಾಗೂ ಕುಡಿಯಲು ನೀರು ದೊರೆಯದೆ ನಿತ್ಯ ಪರದಾಡುವಂತಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ತುಂಗಭದ್ರಾ ನದಿಯು ಬತ್ತಿ ಹೋಗಿರುವುದರಿಂದ ಗ್ರಾಮಸ್ಥರು ಹಲವು ತಿಂಗಳಿನಿಂದ ಕೊಳವೆ ಬಾವಿಯ ನೀರನ್ನೇ ಅವಲಂಬಿಸಿದ್ದಾರೆ. ಹದಿನೈದು ದಿನಗಳಿಂದ ಗ್ರಾಮ ಪಂಚಾಯ್ತಿಯವರು ಕೊಳವೆ ಬಾವಿಗಳ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿರುವುದರಿಂದ ಗ್ರಾಮಸ್ಥರೆಲ್ಲ ನೀರಿಗಾಗಿ ಅಲೆದಾಡಬೇಕಾಗಿದೆ’ ಎಂದು ದೂರಿದರು.

‘ಗ್ರಾಮದ ಜನತೆಗೆ ನೀರು ಪೂರೈಸುವ ಉದ್ದೇಶದಿಂದ ಗ್ರಾಮದಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಬಾವಿಯಲ್ಲಿ ಸಾಕಷ್ಟು ನೀರು ಬಿದ್ದಿದ್ದು, ಗ್ರಾಮ ಪಂಚಾಯ್ತಿಯವರು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ, ಪಂಪ್ ಸೆಟ್ ಜೋಡಿಸದೆ ಇರುವುದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರು ನೀರಿಲ್ಲದೇ ಪರದಾಡುವಂತಾಗಿದೆ’ ಎಂದು ಆರೋಪಿಸಿದರು.

‘ಕುಡಿಯುವ ನೀರಿಗಾಗಿ ಸಾಕಷ್ಟು ಹಣವನ್ನು ಮೀಸಲಿರಿಸಲಾಗಿದೆ ಎಂದು ತಾಲ್ಲೂಕು ಮಟ್ಟದ ಅಧಿಕಾರಿಗಳು ಹೇಳುತ್ತಿದ್ದಾರೆ. ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೆ ಇಲ್ಲಿಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಸ್ಥರಿಗೆ ನೀರು ಕೊಡದೇ ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ನಂತರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್.ಮುಂಡರಗಿ, ಸಿಪಿಐ ತುಕಾರಾಂ ನೀಲಗಾರ ಸ್ಥಳಕ್ಕೆ ಬಂದು ಒಂದು ವಾರದೊಳಗೆ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.

ಮುಖಂಡರಾದ ವೀರನಗೌಡ ಪಾಟೀಲ, ಕಳಕಪ್ಪ ಗುಡ್ಲಾನೂರ, ದೇವಪ್ಪ ಗುಡ್ಲಾನೂರ, ಪ್ರಾಣೇಶ, ಮಾಬುಸಾಬ ನದಾಫ, ಮಾಬುಸಾಬ್ ಬಳ್ಳಾರಿ, ಹನುಮಂತಪ್ಪ ಕುರಿ, ನೂರಜಾನಬಿ ಕಾದರನವರ, ಶಾವಕ್ಕ ಕುಂಬಾರ, ರೇಣವ್ವ ಕುಂಬಾರ, ದಾಕ್ಷಾಯಣಿ ಕುಂಬಾರ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.