ADVERTISEMENT

ಕಣ್ಮರೆಯಾದ ಶಾವಿಗೆ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:02 IST
Last Updated 27 ಮೇ 2018, 13:02 IST
ಗಜೇಂದ್ರಗಡದಲ್ಲಿ ಯಂತ್ರದಲ್ಲಿ ಶಾವಿಗೆ ತಯಾರಿಸುತ್ತಿರುವುದು
ಗಜೇಂದ್ರಗಡದಲ್ಲಿ ಯಂತ್ರದಲ್ಲಿ ಶಾವಿಗೆ ತಯಾರಿಸುತ್ತಿರುವುದು   

ಗಜೇಂದ್ರಗಡ: ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ಕಳೆದೊಂದು ತಿಂಗಳಿಂದ ಶಾವಿಗೆ ಸುಗ್ಗಿ ಆರಂಭವಾಗಿದೆ.ಈಗ ಶಾವಿಗೆ ಸಿದ್ಧಪಡಿಸುವ ಗಿರಣಿಗಳಿಗೆ ಬಿಡುವಿಲ್ಲದ ಕೆಲಸ. ಮನೆಗಳಲ್ಲಿ ಶಾವಿಗೆ ಮಾಡುವ ಯಂತ್ರಗಳನ್ನು ಹೊಂದಿರುವವರಿಗ ಇದು ದುಡಿಮೆಯ ಕಾಲ. ಮಹಿಳೆಯರು ಸಾಂಪ್ರದಾಯಿಕ ಶಾವಿಗೆ ಮಾಡುವ ವಿಧಾನಕ್ಕಿಂತ, ಯಂತ್ರದ ಶಾವಿಗೆಗೆ ಮಾರು ಹೋಗಿದ್ದಾರೆ. ತಾಲ್ಲೂಕಿನಾದ್ಯಂತ ಎಲ್ಲೆಡೆ ಬಿಸಿಲಿಗೆ ಒಣಗಲು ಹಾಕಿರುವ ಶಾವಿಗೆ ಎಳೆಗಳನ್ನು ಈಗ ಕಾಣಬಹುದು.

ಮಧ್ಯಾಹ್ನದ ವೇಳೆ ನಿಗಿ ನಿಗಿ ಕೆಂಡದಂತಿರುವ ಬಿಸಿಲು, ಶಾವಿಗೆಯನ್ನು ಕೆಲವು ಗಂಟೆಗಳಲ್ಲೇ ಗರಿಗರಿಯಾಗಿ ಒಣಗಿಸುತ್ತದೆ. ಹಿಂದೆಲ್ಲಾ ಗ್ರಾಮಗಳಲ್ಲಿ ಓಣಿಯ ಮಹಿಳೆಯರೆಲ್ಲ ಸೇರಿ ಗೋಧಿ ಹಿಟ್ಟನ್ನು ಹದಗೊಳಿಸಿ, ಶಾವಿಗೆ ಮಣೆ ಮೇಲೆ ಕುಳಿತು ಶಾವಿಗೆ ಹೊಸೆಯುತ್ತಿದ್ದರು. ಒಬ್ಬರು ತಿಕ್ಕಿದರೆ, ಇನ್ನೊಬ್ಬರು ಕೆಳಗೆ ಬೀಳುವ ಶಾವಿಗೆ ಎಳೆಗಳನ್ನು ಸಂಗ್ರಹಿಸಿ, ಒಂದು ಕೋಲಿನ ಮೇಲೆ ಹರಡಿ ಬಿಸಿಲಿಗೆ ಇಡುತ್ತಿದ್ದರು.

ಶಾವಿಗೆ ಹೊಸೆಯುವ ಕಾರ್ಯದಲ್ಲಿ ಮಹಿಳೆಯರು ನೈಪುಣ್ಯ ಮೆರೆಯುತ್ತಿದ್ದರು. ಶಾವಿಗೆ ತಯಾರಿಸುವ ಸಂಭ್ರಮದಲ್ಲಿ ಜನಪದ ಹಾಡುಗಳನ್ನು ಕಟ್ಟುತ್ತಾ ಕಲಾ ಪ್ರತಿಭೆ ಅನಾವರಣಕ್ಕೂ ಹಳ್ಳಿಯ ಮನೆಗಳು ವೇದಿಕೆ ಆಗುತ್ತಿದ್ದವು. ಈಗ
ಶಾವಿಗೆ ಮಣೆ ಮೂಲೆ ಸೇರಿದೆ. ಮಹಿಳೆಯರು ಶಾವಿಗೆ ಗಿರಣಿಗಳಿಗೆ ದೌಡಾಯಿಸುತ್ತಿದ್ದಾರೆ. ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಆರಂಭವಾಗುವ ವೇಳೆ ಸೌತೆ ಬೀಜ, ಶಾವಿಗೆ ಹೊಸೆಯುತ್ತ ಗ್ರಾಮದಲ್ಲಿ ಹರಟೆ ಹೊಡೆಯುತ್ತಾ ಸಂತಸ ಪಡುತ್ತಿದ್ದ ಮಹಿಳೆಯರು, ಇದೀಗ ಯಂತ್ರದಿಂದ ಎಳೆಎಳೆಯಾಗಿ ಹೊರ ಬರುವ ಶಾವಿಗೆಯನ್ನೇ ಅಚ್ಚರಿಯಿಂದ ನೋಡುತ್ತಿದ್ದಾರೆ.

ADVERTISEMENT

ಯುಗಾದಿ ನಂತರ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಈ ಸಮಯದಲ್ಲಿ ರೈತರು ಕೃಷಿ ಉಪಕರಣಗಳನ್ನು ದುರಸ್ತಿ ಮಾಡಿ ಇಟ್ಟುಕೊಳ್ಳುತ್ತಾರೆ. ಮಳೆಯಾದ ನಂತರ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿ ಹದಗೊಳಿಸುತ್ತಾರೆ. ಈ ಸಮಯದಲ್ಲಿ ರೈತ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ, ಶಾವಿಗೆ, ಸೌತೆ ಬೀಜ, ಆಣಿಕಲ್ ಬೀಜದಂತ ಪದಾರ್ಥಗಳನ್ನು ಇಡೀ ವರ್ಷಕ್ಕಾಗುವಷ್ಟು ತಯಾರಿಸಿ ಇಟ್ಟುಕೊಳ್ಳುವದು ಸಂಪ್ರದಾಯ. ಈಗ ಆ ಸಂಪ್ರದಾಯ, ಸಂಭ್ರಮ ಕಣ್ಮರೆ ಆಗಿದೆ.

‘ಶಾವಿಗೆ ಮಾಡಲು ಒಂದು ಕೆ.ಜಿ ಹಿಟ್ಟಿಗೆ ₹ 10 ನಿಗದಿ ಮಾಡಿದ್ದೇವೆ’ ಎಂದು ಶಾವಿಗೆ ಯಂತ್ರ ಹೊಂದಿರುವ ಮಹಿಳೆ ಲಕ್ಷ್ಮೀಬಾಯಿ ಹೇಳಿದರು.

‘ನಾವು ಚಿಕ್ಕವರಿದ್ದಾಗ ಓಣಿಯ ಎಲ್ಲ ಮಹಿಳೆಯರು ಸೇರಿ ಗೋಧಿ ಹದಗೊಳಿಸಿ, ಬೀಸು ಕಲ್ಲಿನಲ್ಲಿ ಬೀಸಿ, ನಂತರ ಹಿಟ್ಟು ಸೋಸಿ ಮನೆಯ ಕಟ್ಟೆ ಮೇಲೆ ಶಾವಿಗೆ ಮಣೆಗಳನ್ನು ಇಟ್ಟು ಶಾವಿಗೆ ಹೊಸೆಯುತ್ತಿದ್ದೆವು. ಕೈಯಿಂದ ತಯಾರಿಸಿದ ರುಚಿ, ಯಂತ್ರದ ಶಾವಿಗೆಗೆ ಇಲ್ಲ. ಈಗ ಅದು ನೆನಪು ಮಾತ್ರ’ ಎಂದು ರೈತ ಮಹಿಳೆಯರಾದ ನಾಗವ್ವ ಕುಡಗುದ್ರಿ, ಗಿರಿಜವ್ವ ಉಪ್ಪಿನಬೇಟಗೇರಿ ಸ್ಮರಿಸಿಕೊಂಡರು.

ಶ್ರೀಶೈಲ ಎಂ. ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.