ADVERTISEMENT

ಜಿಲ್ಲೆಯಲ್ಲಿ ಜೀವಜಲಕ್ಕೆ ತತ್ವಾರ

5 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ; 104 ಗ್ರಾಮಗಳಲ್ಲಿ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 5:17 IST
Last Updated 2 ಮಾರ್ಚ್ 2017, 5:17 IST
ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಬರದ ದರ್ಶನ ನೀಡುವ ಭೀಷ್ಮಕೆರೆ
ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಬರದ ದರ್ಶನ ನೀಡುವ ಭೀಷ್ಮಕೆರೆ   

ಗದಗ: ಜಿಲ್ಲೆಯಲ್ಲಿ ಮುಂಬರುವ ದಿನ ಗಳಲ್ಲಿ 104 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಬಹುದು ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಸದ್ಯ ಗದಗ ತಾಲ್ಲೂಕಿನ ನಾಗಾವಿ, ರೋಣ ತಾಲ್ಲೂಕಿನ ಅಮರ ಗಟ್ಟಿ, ರಾಜೂರು, ಲಕ್ಕಲಕಟ್ಟಿ, ಭೈರಾ ಪುರ ಗ್ರಾಮಗಳಲ್ಲಿ ಜಿಲ್ಲಾಡಳಿತವು ಪ್ರತಿ ದಿನ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ.

ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿದಿರುವುದರಿಂದ ಹೊಸ ಬೋರ್‌ವೆಲ್‌ ಕೊರೆಸಲು ಜಿಲ್ಲಾಡಳಿತ ನಿಷೇಧ ಹೇರಿದೆ. ಈಗಾಗಲೇ ಖಾಸಗಿ ಯವರು ಕೊರೆದಿರುವ ಮತ್ತು ಯಥೇಚ್ಛ ಪ್ರಮಾಣದಲ್ಲಿ ನೀರಿನ ಲಭ್ಯತೆ ಇರುವ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, ನೀರು ಪೂರೈಕೆಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಬರ ನಿರ್ವಹಣೆಗಾಗಿ ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರ ಬೇಕಂದು ಆದೇಶಿಸಲಾಗಿದೆ. ತಾಲ್ಲೂಕು, ಹೋಬಳಿ, ಗ್ರಾಮವಾರು ನೋಡಲ್ ಅಧಿ ಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಜಿಲ್ಲಾಡಳಿತದ ಆದೇಶ ಸಮ ರ್ಪಕವಾಗಿ ಜಾರಿಗೆ ಬಂದಿಲ್ಲ. ಸ್ವತಃ ಬರ ನಿರ್ವಹಣೆಗೆ ಬೇಕಾದ ದತ್ತಾಂಶವನ್ನು ಅಧಿಕಾರಿಗಳಿಂದ ಸಂಗ್ರಹಿಸಲು ಜಿಲ್ಲಾ ಆಡಳಿತವೇ  ಹರಸಾಹಸ ಪಡುತ್ತಿದೆ.

ಕೇಂದ್ರ ಬರ ಅಧ್ಯಯನ ತಂಡ, ಸಚಿವ ಸಂಪುಟ ಉಪ ಸಮಿತಿ, ಇಲಾಖೆಗಳ ಉನ್ನತಾಧಿಕಾರಿಗಳು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾತ್ರ ಸಮಗ್ರ ಮಾಹಿತಿ ಕ್ರೋಢಿಕರಣವಾಗುತ್ತಿದೆ. ಉಳಿದ ದಿನಗಳಲ್ಲಿ ಅಧಿಕಾರಿಗಳು ಬರ ವನ್ನು ಅದರ ಪಾಡಿಗೆ ಬಿಟ್ಟಿದ್ದಾರೆ.

ಸತತ ನಾಲ್ಕು ವರ್ಷಗಳ ಬರದಿಂದ ಜಿಲ್ಲೆ ತತ್ತರಿಸಿದ್ದು, ಮಳೆಯ ಕೊರತೆ ಯಿಂದ ಕುಡಿಯುವ ನೀರು, ಜಾನುವಾ ರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ.
ಬರ ನಿರ್ವಹಣೆಗೆ ಜಿಲ್ಲೆಯಲ್ಲಿ ಅನು ದಾನ ಕೊರತೆ ಇಲ್ಲ. ಕುಡಿಯುವ ನೀರು ಪೂರೈಕೆ ಹಾಗೂ ಗ್ರಾಮ ಪಂಚಾಯಿತಿ ಗಳಲ್ಲಿ ಜಾನುವಾರುಗಳ ಸಂಖ್ಯೆಗೆ ಅನು ಗುಣವಾಗಿ ಮೇವು ಬ್ಯಾಂಕ್‌ ಆರಂಭಿ ಸಲು ಕ್ರಮ ವಹಿಸಲಾಗಿದೆ.

ಮೇವು ಪೂರೈಕೆದಾರರೊಂದಿಗೆ ಸಭೆ ನಡೆಸಲಾ ಗಿದ್ದು, ಶೀಘ್ರದಲ್ಲಿ ಹೆಚ್ಚುವರಿ ಮೇವನ್ನು ಅವರು ಪೂರೈಸಲಿದ್ದಾರೆ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ. ಗದ್ಯಾಳ.

ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿ ಸಲು ತಾಲ್ಲೂಕುವಾರು ಸಹಾಯವಾಣಿ ಗಳನ್ನು ಆರಂಭಿಸಲಾಗಿದೆ. ತಾಲ್ಲೂಕು ಟಾಸ್ಕ್‌ಪೋರ್ಸ್‌ಗಳು ರಚನೆಯಾಗಿವೆ. ಗ್ರಾಮ ಮಟ್ಟದಲ್ಲಿ ಬರ ನಿರ್ವಹಣೆ ಜವಾ ಬ್ದಾರಿಯನ್ನು ಆಯಾ ನೋಡಲ್ ಅಧಿ ಕಾರಿಗಳಿಗೆ ವಹಿಸಲಾಗಿದೆ. ಕುಡಿಯುವ ನೀರು ಪೂರೈಕೆ, ಕೊಳವೆ ಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆಯಿಸಿ, ಪುನಶ್ಚೇತನ ಗೊಳಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ವಿಡಿಯೊ  ಸಂವಾದ  6ರಂದು
ಜಿಲ್ಲೆಯ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್. ರವಿಕುಮಾರ್ ಅವರು ಮಾರ್ಚ್ 6 ರಂದು ಜಿಲ್ಲಾಧಿಕಾರಿ ಜತೆ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ತಾಲ್ಲೂಕುವಾರು ಮಾಹಿತಿ ಕಲೆ ಹಾಕುತ್ತಿದೆ.

ಜಿಲ್ಲೆಗಳ ಮೇವು ದಾಸ್ತಾನು ಪರಿಸ್ಥಿತಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ಉದ್ಯೋಗ ಖಾತ್ರಿ ಯೋಜನೆ, ಕೆರೆ ಸಂಜೀವಿನಿ ಯೋಜನೆಯಡಿ ಕೈಗೊಂಡ ಕಾಮಗಾರಿ, ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿರುವ ಅನುದಾನದ ಬಳಕೆ ಬಗ್ಗೆ ಸಂವಾದ ನಡೆಯಲಿದೆ ಎಂದು ತಿಳಿದುಬಂದಿದೆ.

ADVERTISEMENT

*
ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.
-ಐ.ಜೆ. ಗದ್ಯಾಳ,
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.