ADVERTISEMENT

ಜೈನ ಬಸದಿಗೆ ಬೇಕಿದೆ ಕಾಯಕಲ್ಪ

ರಾಜೇಂದ್ರಗೌಡ ಪಾಟೀಲ
Published 3 ಡಿಸೆಂಬರ್ 2017, 9:32 IST
Last Updated 3 ಡಿಸೆಂಬರ್ 2017, 9:32 IST
ಬಸವೇಶ್ವರ ಗುಡ್ಡದ ಮೇಲಿರುವ ಐತಿಹಾಸಿಕ ಚಂದ್ರನಾಥ ಬಸದಿ
ಬಸವೇಶ್ವರ ಗುಡ್ಡದ ಮೇಲಿರುವ ಐತಿಹಾಸಿಕ ಚಂದ್ರನಾಥ ಬಸದಿ   

ಮುಳಗುಂದ: ಮುಳಗುಂದ ಐತಿಹಾಸಿಕ ನಗರವಾಗಿದ್ದು ಸಿದ್ದೇಶ್ವರ ದೇವಾಲಯ, ನಯಸೇನನ ಕಾಲದ ಜೈನ ಬಸದಿ, ನಗರೇಶ್ವರ ದೇವಾಲಯ, ಹೀಗೆ ಅನೇಕ ಐತಿಹಾಸಿಕ ದೇವಾಲಯಗಳು ಇಲ್ಲಿವೆ. ರಾಷ್ಟ್ರಕೂಟರು ಈ ಊರನ್ನು ಆಳುತ್ತಿದ್ದಾಗ ಮುಳಗುಂದ ಜೈನರ ತೀರ್ಥ ಕ್ಷೇತ್ರವಾಗಿತ್ತು. ಈಗಲೂ ಶಿಥಿಲ ಬಸದಿಗಳು, ಜಿನಾಲಯಗಳು ಇಲ್ಲಿವೆ.

ಪಟ್ಟಣದ ಬಸವೇಶ್ವರ ಗುಡ್ಡದಲ್ಲಿರುವ ಪುರಾತನ ಜೈನ ಬಸದಿಯ ಜೀರ್ಣೋದ್ಧಾರ ಕಾರ್ಯ ಅಪೂರ್ಣವಾಗಿದೆ. ಜೀರ್ಣೋದ್ಧಾರ ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿದ್ದು, ಮತ್ತೆ ಬಸದಿ ಅವಸಾನದ ಅಂಚಿಗೆ ತಲುಪಿದೆ.

ಬಸದಿಯು ಸುಂದರ ಕೆತ್ತನೆ, ಕುಸರಿ ಕಲೆಯಿಂದ ಕೂಡಿದ್ದು, ಕಲ್ಲಿನಲ್ಲಿ ಕೆತ್ತಿದ ಮೂರ್ತಿಗಳನ್ನು ಒಳಗೊಂಡಿದೆ. ಅಲ್ಲದೇ ಇಲ್ಲಿ ಹಲವು ಶಾಸನಗಳು ಇದ್ದು, ಅವುಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಜೀರ್ಣೋದ್ಧಾರ ಕಾರ್ಯ ಅರ್ಧಕ್ಕೆ ನಿಂತಿದ್ದರಿಂದ ಬಸದಿ ಮತ್ತಷ್ಟು ಪಾಳುಬಿದ್ದಿದೆ. ಇಲ್ಲಿನ ಶಿಲಾ ಶಾಸನಗಳು, ಸ್ಮಾರಕಗಳು, ಕಾಲಗರ್ಭ ಸೇರುವ ಮುನ್ನ ಪುರಾತತ್ವ ಇಲಾಖೆ ಬಸದಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ADVERTISEMENT

ಇಲ್ಲಿನ ಪಾರ್ಶ್ವನಾಥ ಬಸದಿ ಹಾಗೂ ಚಂದ್ರನಾಥ ಬಸದಿಗಳು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿವೆ. ನೋಡಲು ಬಲು ಆಕರ್ಷಕವಾಗಿದೆ. ಆದರೆ, ಹಲವು ವರ್ಷಗಳಿಂದ ಬಸದಿ ಶಿಥಿಲಾವಸ್ಥೆಯಲ್ಲಿದ್ದು, ಇಲ್ಲಿ ಮುಳ್ಳಿನ ಗಿಡ–ಗಂಟಿಗಳು ಬೆಳೆದು ನಿಂತಿವೆ. ಸುತ್ತಲಿನ ಜನ ಇದರ ಮರೆಯಲ್ಲೆ ಮಲ–ಮೂತ್ರ ವಿಸರ್ಜನೆ ಮಾಡುತ್ತಾರೆ. ಪುರಾತತ್ವ ಇಲಾಖೆ ಬಸದಿಯ ಜೀರ್ಣೋದ್ಧಾರಕ್ಕೆ ಮುಂದಾದರೆ ಇಲ್ಲಿ ಇತಿಹಾಸ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು ಎನ್ನುತ್ತಾರೆ ಪಟ್ಟಣದ ನಿವಾಸಿಗಳು.

ಮುಳಗುಂದ ಜೈನ, ವೈದಿಕ, ವೀರಶೈವ ಕೇಂದ್ರವಾಗಿದೆ. ಸಮೀಪದ ನೀಲಗುಂದದ ಬೆಟ್ಟದಲ್ಲಿ ಶಿಲಾಯುಗದ ಅನೇಕ ಬಂಡೆ ಚಿತ್ರಗಳೂ ಇವೆ. ಕವಿ ನಯಸೇನ ಮುಳಗುಂದವನು ಎನ್ನುವುದು ಹೆಮ್ಮೆ. ನಯಸೇನ ಕವಿಯ ಧರ್ಮಾಮೃತ ಗ್ರಂಥ ಕನ್ನಡದಲ್ಲೇ ರಚನೆಯಾಗಿದೆ. ಕನ್ನಡದ ಅಪ್ಪಟ ಭಾಷಾಭಿಮಾನಿಯಾಗಿದ್ದ ನಯನಸೇನನ ಕಾಲದ ಬಸದಿ ಈಗ ಶಿಥಿಲಾವಸ್ಥೆಯಲ್ಲಿದೆ.

‘ಕೆಲವು ವರ್ಷಗಳ ಹಿಂದೆ ಜೈನ ಸಮುದಾಯದವರು ಸೇರಿ ಬಸದಿಯ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದರು. ಆದರೆ, ಅದು ಪೂರ್ಣವಾಗಿಲ್ಲ. ಇಲಾಖೆ ಇತ್ತ ಗಮನ ಹರಿಸಲಿದೆ’ ಎಂದು ಜಿಲ್ಲಾ ಪುರಾತತ್ವ ಇಲಾಖೆಯ ರಾಜಾರಾಂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.