ADVERTISEMENT

ನಗರೋತ್ಥಾನ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 9:32 IST
Last Updated 21 ಮಾರ್ಚ್ 2018, 9:32 IST

ಲಕ್ಷ್ಮೇಶ್ವರ: ಇಲ್ಲಿನ ಪುರಸಭೆ ಹತ್ತಿರ ಸೋಮವಾರ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಮೂರನೇ ಹಂತದ ನಗರೋತ್ಥಾನ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ ಮತ್ತು ಕುಡಿಯುವ ನೀರನ್ನು ಒದಗಿಸುವುದಕ್ಕಾಗಿ ₹ 5.45 ಕೋಟಿ ಅನುದಾನ ಬಂದಿದ್ದು ಈವರೆಗೆ ಲಕ್ಷ್ಮೇಶ್ವರದ ಅಭಿವೃದ್ಧಿಗೆ ₹ 10 ಕೋಟಿಗೂ ಅಧಿಕ ಅನುದಾನವನ್ನು ಸರ್ಕಾರ ನೀಡಿದೆ. ನೂತನ ಬಡವಾಣೆಗಳಾದ ಅಬ್ದುಲ್‌ ಕಲಾಂ ನಗರ, ಲಕ್ಷ್ಮೀ ನಗರ, ವಿನಾಯಕ ನಗರ, ಇಂದಿರಾ ನಗರ, ಮುಕ್ತಿನಗರ, ಜಿ.ಎಂ. ಮಹಾಂತಶೆಟ್ಟರ ನಗರ ಸೇರಿ ಹಲವಾರು ನೂತನ ಬಡಾವಣೆಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕಿದ್ದು ಇದಕ್ಕಾಗಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

‘ತುಂಗಭದ್ರಾ ನದಿ ಬತ್ತಿದ್ದು, ಪಟ್ಟಣದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಪರಿಹರಿಸಲು ಪುರಸಭೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಮಾರ್ಚ್ 22ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಡಿಬಿಒಟಿ ಯೋಜನೆಯಡಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಲಿದ್ದಾರೆ. ಈ ಯೋಜನೆ ಜಾರಿಯಿಂದ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲ್ಲೂಕುಗಳ ಹಳ್ಳಿಗಳಿಗೆ ಕುಡಿಯುವ ನೀರು ಲಭ್ಯ ಆಗಲಿದೆ’ ಎಂದು ಹೇಳಿದರು.

ADVERTISEMENT

‘ಮನೆ ಇಲ್ಲದ ಬಡವರಿಗೆ ಆಶ್ರಯ ನಿವೇಶನಗಳನ್ನು ಹಂಚಲು ಈಗಾಗಲೇ ಕ್ರಮಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ ನಿವೇಶನ ನೀಡಲಾಗುವುದು’ ಎಂದರು.

ಪುರಸಭೆ ಅಧ್ಯಕ್ಷ ಎಂ.ಆರ್.ಪಾಟೀಲ, ಸದಸ್ಯರಾದ ವಿ.ಜಿ. ಪಡಗೇರಿ, ಗುರುಪುತ್ರ ಮೆಡ್ಲೇರಿ ಮಾತನಾಡಿದರು. ಉಪಾಧ್ಯಕ್ಷ ಬಸವರಾಜ ಓದುನವರ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಣ್ಣ ಸುತಾರ, ಜಯಕ್ಕ ಕಳ್ಳಿ, ಗಂಗಮ್ಮ ಗದ್ದಿ, ಗಂಗಮ್ಮ ಫಕ್ಕೀರಸ್ವಾಮಿಮಠ, ಶಂಕ್ರಮ್ಮ ಕರಡಿ, ನಾಗಪ್ಪ ಓಂಕಾರಿ, ಶೇಕಣ್ಣ ಹಂಜಿ, ಶಿವಪುತ್ರ ಯರ್ಲಗಟ್ಟಿ, ಅಂಬರೀಶ ತೆಂಬದಮನಿ, ಸುಪ್ರತಾ ಕನ್‌ಸ್ಟ್ರಕ್ಷನ್‌ನ ವಿಶ್ವನಾಥ ಶೆಟ್ಟಿ ಇದ್ದರು. ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಸ್ವಾಗತಿಸಿದರು. ಎಂ.ಎನ್‌. ಹಾದಿಮನಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.