ADVERTISEMENT

ಬೆಳಗಾವಿ ಚಲೋ: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 8:37 IST
Last Updated 15 ನವೆಂಬರ್ 2017, 8:37 IST

ಗದಗ: ಖಾಸಗಿ ಆಸ್ಪತ್ರೆಗಳ ವೈದ್ಯರ ಬೆಳಗಾವಿ ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರವೂ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಜಿಲ್ಲಾ ಕೇಂದ್ರ ಗದುಗಿನಲ್ಲೇ 60ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಬಹುತೇಕ ಎಲ್ಲ ಆಸ್ಪತ್ರೆಗಳು ಸೇವೆ ಸ್ಥಗಿತಗೊಳಿಸಿದ್ದವು. ಹುಲಕೋಟಿ, ಕೋಟುಮಚಗಿ, ಡಂಬಳ, ಬಳಗಾನೂರು, ಲಕ್ಕುಂಡಿ, ಅಸುಂಡಿ, ಬಿಂಕದಕಟ್ಟಿ, ಮಲ್ಲಸಮುದ್ರ, ಕಣಗಿಹಾಳ, ಹೊಂಬಳ ಸೇರಿ ಗ್ರಾಮಾಂತರ ಪ್ರದೇಶಗಳಿಂದ ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದಿದ್ದ ರೋಗಿಗಳು ತೀವ್ರ ತೊಂದರೆ ಅನುಭವಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ: ತಾಲ್ಲೂಕಿನ ಅಂತೂರ–ಬೆಂತೂರ ಗ್ರಾಮದ ಗರ್ಭಿಣಿ ವೀರಸಂಗಮ್ಮ ಅವರಿಗೆ ನ. 14ರಂದು ಹೆರಿಗೆ ದಿನಾಂಕ ನಿಗದಿಯಾಗಿತ್ತು. ಗದುಗಿನ ರಾಧಾ ಕುಲಕರ್ಣಿ ಖಾಸಗಿ ಆಸ್ಪತ್ರೆಯ ವೈದ್ಯರು ಹೆರಿಗೆಗಾಗಿ ಇದೇ ದಿನ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಅದರಂತೆ ಅವರು ಆಸ್ಪತ್ರೆಗೆ ಬಂದಿದ್ದರು. ಆದರೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದ ಅವರನ್ನು ತಕ್ಷಣವೇ ಸಂಬಂಧಿಕರು ಜಿಲ್ಲಾ ಆಸ್ಪತ್ರೆಗೆ ಕರೆದೊಂಡು ಹೋದರು. ಅಲ್ಲಿ ಅವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಲಾಯಿತು.

‘ಆಸ್ಪತ್ರೆ ಆವರಣಕ್ಕೆ ಬಂದ ನಂತರವೇ ಪ್ರತಿಭಟನೆ ಮಾಹಿತಿ ಲಭಿಸಿತು. ಇಂದೇ ದಾಖಲಾಗುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಕನಿಷ್ಠ, ವೈದ್ಯರ ಪ್ರತಿಭಟನೆ ಇದೆ, ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂಬ ಮಾಹಿತಿಯನ್ನಾದರೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ನೀಡಬೇಕಿತ್ತು. ಆದರೆ, ಅವರ ಬೇಜವಾಬ್ದಾರಿತನದಿಂದ ಪರದಾಡುವಂತಾಯಿತು. ಸಕಾಲದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ತಾಯಿ, ಮಗುವಿನ ಜೀವ ಉಳಿಯಿತು’ ಎಂದು ಅವರ ಸಂಬಂಧಿಕರೊಬ್ಬರು ಹೇಳಿದರು.

ADVERTISEMENT

ತಾಲ್ಲೂಕು ಕೇಂದ್ರಗಳಲ್ಲಿ ಸಮಸ್ಯೆ ಇಲ್ಲ: ಗದಗ ಹೊರತುಪಡಿಸಿ ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿ ವೈದ್ಯರ ಪ್ರತಿಭಟನೆ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಲಕ್ಷ್ಮೇಶ್ವರ, ಮುಂಡರಗಿ, ರೋಣ, ನರಗುಂದದಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆದಿದ್ದವು. ಖಾಸಗಿ ಸ್ಕ್ಯಾನಿಂಗ್‌, ರಕ್ತನಿಧಿ, ಎಕ್ಸ್‌ರೇ, ರಕ್ತ ಪರೀಕ್ಷೆ ಕೇಂದ್ರಗಳು ಕಾರ್ಯನಿರ್ವಹಿಸಿದವು.

ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಸೂಚನೆ ಅನ್ವಯ ಗದಗ ಜಿಲ್ಲಾ ಕೇಂದ್ರದಿಂದ 150ರಿಂದ 200 ವೈದ್ಯರು ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ, ಜಿಲ್ಲೆಯ ವಿವಿಧ ಭಾಗಗಳಿಂದ ಗದುಗಿನ ಖಾಸಗಿ ಆಸ್ಪತಗಳಿಗೆ ಚಿಕಿತ್ಸೆಗಾಗಿ ಬಂದವರು ಸಮಸ್ಯೆಗೆ ಸಿಲುಕಿದರು. ಗೊಣಗಿಕೊಂಡೇ ಹಳೆಯ ಬಸ್‌ನಿಲ್ದಾಣದಿಂದ ಖಾಸಗಿ ವಾಹನ, ಆಟೊಗಳಲ್ಲಿ ನಗರದ ಹೊರಗಿರುವ ಜಿಲ್ಲಾ ಆಸ್ಪತ್ರೆಗೆ ಧಾವಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ರೋಗಿಗಳ ದಟ್ಟಣೆ ಕಂಡುಬಂತು. ಮಧ್ಯಾಹ್ನದ ವೇಳೆಗೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯಲು 700ಕ್ಕೂ ಹೆಚ್ಚು ಜನರು ಚೀಟಿ ಮಾಡಿಸಿಕೊಂಡಿದ್ದರು.

‘ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರಿಗೂ ರಜೆ ನೀಡಲಿಲ್ಲ’ ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ನಿರ್ದೇಶಕ ಪಿ.ಎಸ್‌.ಭೂಸರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

* * 

ಜಿಲ್ಲಾ ಆಸ್ಪತ್ರೆಯಲ್ಲಿ ನ. 13ರಂದು 1078 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ನ. 14ರಂದು ಚಿಕಿತ್ಸೆಗಾಗಿ 700ಕ್ಕೂ ಹೆಚ್ಚು ಮಂದಿ ಚೀಟಿ ಮಾಡಿಸಿಕೊಂಡಿದ್ದಾರೆ. ಮುನ್ನೆಚ್ಚರಿಕೆ ವಹಿಸಲಾಗಿದೆ
ಪಿ.ಎಸ್‌.ಭೂಸರೆಡ್ಡಿ
ಜಿಮ್ಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.