ADVERTISEMENT

ರೈತರ ಕೃಷಿ ಸಾಲ ಮನ್ನಾಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 6:40 IST
Last Updated 15 ಏಪ್ರಿಲ್ 2017, 6:40 IST

ನರೇಗಲ್: ಉತ್ತರ ಪ್ರದೇಶದ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ರೈತರ ಸಾಲಗಳನ್ನು ಅಲ್ಲಿಯ ಮುಖ್ಯಮಂತ್ರಿಗಳು ಮನ್ನಾ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ಡಾ.ರಾಜ್ ಅಭಿಮಾನಿ ರಾಮಣ್ಣ ಬೈರಗೊಂಡ ನೇತೃತ್ವದಲ್ಲಿ ಆಚರಿಸಿದ ಡಾ. ರಾಜಕುಮಾರ್ ಅವರ 11ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತತ ಮೂರು ವರ್ಷದಿಂದ ಬರಗಾಲ ರೈತರನ್ನು ಕಂಗಾಲು ಮಾಡಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ರೈತರು ಸಂಕಷ್ಟದಲ್ಲಿದ್ದಾರೆ.

ತುತ್ತಿಗೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನವೇ ಸರ್ಕಾರ ರೈತರ ನೆರವಿಗೆ ಬರಬೇಕು. ಕೃಷಿಗಾಗಿ ರೈತರು ಮಾಡಿದ ಎಲ್ಲ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರಿ ಹೇಳಿದರು.ಮುಂದಿನ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಾಗಿ ರೈತರಿಗೆ ದೀರ್ಘಾವಧಿ ಸಾಲ ವಿತರಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನರಗುಂದದಲ್ಲಿ ಮಹದಾಯಿ ನೀರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಇಂದಲ್ಲ ನಾಳೆ ಮಹದಾಯಿ ನೀರು ಸಿಕ್ಕೇ ಸಿಗುತ್ತದೆ. ಈ ನೀರು ಹಾಲಕೆರೆಯಲ್ಲಿ ಡಾ. ರಾಜ್ ಕುಮಾರ ಅಭಿಮಾನಿ ರಾಮಣ್ಣ ಬೈರಗೊಂಡ ನೀಡಿರುವ 38 ಗುಂಟೆ ಜಾಗದ ಕಸ್ತೂರಿ ನಿವಾಸ ಕೆರೆಗೆ ಸೇರಬೇಕು. ಆ ಕೆರೆಯ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಸಾಮಾನ್ಯ ಚಹಾ ಅಂಗಡಿಯ ವ್ಯಾಪಾರಸ್ಥ ರಾಮಣ್ಣ ಬೈರಗೊಂಡ ಅವರು ಡಾ. ರಾಜ್ ಅವರ ಕಟ್ಟಾಭಿಮಾನಿಯಾಗಿದ್ದು ಕಳೆದ 11 ವರ್ಷಗಳಿಂದ ಇಂಥದ್ದೊಂದು ದೊಡ್ಡ ಪ್ರಮಾಣದ ಡಾ. ರಾಜ್ ಪುಣ್ಯಸ್ಮರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಕಾರ್ಯವನ್ನು ಡಾ.ರಾಜ್ ಕುಟುಂಬದವರು ಕಣ್ಣಾರೆ ಕಾಣಬೇಕು. ನವಲಗುಂದದಲ್ಲಿ ಕೆಲವೆ ದಿನಗಳಲ್ಲಿ ಡಾ. ರಾಜ್ ಕುಟುಂಬದ ಕುಡಿಗಳಾದ ಡಾ. ಶಿವರಾಜಕುಮಾರ, ಪುನೀತ್  ಮತ್ತು ರಾಘವೇಂದ್ರ ರಾಜಕುಮಾರ ಬರುತ್ತಿದ್ದು ಅಲ್ಲಿ  ಅಭಿಮಾನಿ ರಾಮಣ್ಣ ಬೈರಗೊಂಡ ಅವರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.

ಡಾ. ರಾಜಕುಮಾರ ವಂಶ ಕನ್ನಡ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಕುಮಾರಗೌಡ ಮಾತನಾಡಿ ರಾಮಣ್ಣ ಇಂಥ ದೊಡ್ಡ ಕಾರ್ಯಕ್ರಮವನ್ನು ಡಾ. ರಾಜ್ ಹೆಸರಿನಲ್ಲಿ ಮಾಡುತ್ತಿದ್ದಾರೆ ಎಂದು ಕೊಂಡಿರಲಿಲ್ಲ.  ಬಹುಶಃ ಮುಂಬರುವ ದಿನಗಳಲ್ಲಿ ಡಾ. ರಾಜ್ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಅಚ್ಚರಿ ಇಲ್ಲವೆಂದರು. ರಾಮಣ್ಣನವರಿಗೆ ಡಾ. ರಾಜ್ ಕುಟುಂಬದ ವತಿಯಿಂದ ಸಿಗಬೇಕಾದ ಪ್ರೋತ್ಸಾಹವನ್ನು ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ   ನೋಟ್  ಪುಸ್ತಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.