ADVERTISEMENT

‘ವೇತನ ತಾರತಮ್ಯ ಇತ್ಯರ್ಥಪಡಿಸಿ’

ಉಪನ್ಯಾಸಕರಿಗೆ ಸರ್ಕಾರಿ ವೆಚ್ಚದಲ್ಲೇ ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆ ಮಾಡಲಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 4:18 IST
Last Updated 31 ಡಿಸೆಂಬರ್ 2016, 4:18 IST
ಗದುಗಿನಲ್ಲಿ ಶುಕ್ರವಾರ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಇದ್ದಾರೆ
ಗದುಗಿನಲ್ಲಿ ಶುಕ್ರವಾರ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಇದ್ದಾರೆ   

ಗದಗ: 2013ರಲ್ಲಿ ನೇಮಕಗೊಂಡ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಸರ್ಕಾರದ ವೆಚ್ಚದಲ್ಲಿಯೇ ಬಿ.ಇಡಿ ವ್ಯಾಸಂಗಕ್ಕೆ ನಿಯೋಜನೆ ಮಾಡುವುದು ಮತ್ತು ಬಿ.ಇಡ್ ಆದವರಿಗೆ ಪ್ರೋಬೆಷನರಿ ಅವಧಿಯನ್ನು ಘೋಷಿಸಬೇಕು ಮತ್ತು ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಪದವಿ ಪೂರ್ವ ಉಪನ್ಯಾಸಕರ ವೇತನ ತಾರತಮ್ಯವನ್ನು ಮುಖ್ಯಮಂತ್ರಿಗಳು ಬೇಗನೇ ನಿವಾರಿಸಬೇಕೆಂದು ವಿಧಾನಪರಿಷತ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವಾಧ್ಯಕ್ಷ  ಎಸ್. ವ್ಹಿ. ಸಂಕನೂರ ಆಗ್ರಹಿಸಿದರು.

ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಜಿಲ್ಲಾ ಘಟಕ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾ ಘಟಕ, ಜಿಲ್ಲಾ ಪ. ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘ  ಆಶ್ರಯದಲ್ಲಿ  ಶುಕ್ರವಾರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ, ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದಿನ ಸರ್ಕಾರ ನೇಮಿಸಿದ ಶಿಕ್ಷಣ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ ನೇತೃತ್ವದ ಸಮಿತಿಯ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.

ಗದಗ ಜಿಲ್ಲಾ ಪ.ಪೂ. ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷ ಎಂ.ಸಿ.ಕಟ್ಟಿಮನಿ ಮಾತನಾಡಿ, ಪ.ಪೂ.ನೌಕರರಿಗೆ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಕಾಲ್ಪನಿಕ ವೇತನ ಸಮಸ್ಯೆಯ ಕುರಿತು ಸುಪ್ರೀಂಕೋರ್ಟ್‌ ಇತ್ತೀಚಿಗೆ ನೀಡಿದ ಆದೇಶವನ್ನು ಯಾವುದೇ ವಿಳಂಬ ಮಾಡದೇ ಕೂಡಲೇ ಜಾರಿಗೆ ತರಬೇಕು. ಇಲಾಖೆಯು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ಈಗ ಇರುವ ನಿಯಮವನ್ನು ಸಡಿಲಿಸಿ ಈಗ ನೇಮಕವಾಗಿರುವ ಉಪನ್ಯಾಸಕರ ಹುದ್ದೆಗಳನ್ನು ಬೇಗನೇ ಅನುದಾನ ಸಹಿತ ಅನುಮೋದನೆ ನೀಡಬೇಕು ಮತ್ತು ಖಾಸಗಿ ಅನುದಾನಿತ ಪ.ಪೂ.ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಬೋಧನಾ ಶುಲ್ಕದ ಶೇ. 50ರಷ್ಟನ್ನು  ಕಾಲೇಜಿನ ಅಭಿವೃದ್ಧಿಗೆ ಬಳಸುವಂತೆ ಈ ಹಿಂದಿನ ನಿಯಮವನ್ನು ಮತ್ತೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಎಸ್.ಎಚ್. ಬೀರಕಬ್ಬಿ ಮಾತನಾಡುತ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರ ವೇತನ ತಾರತಮ್ಯ ಶೀಘ್ರವೆ ಪರಿಹರಿಸಬೇಕು ಮತ್ತು ಎಂ.ಫಿಲ್. ಪಿ.ಎಚ್.ಡಿ. ಆದ ಉಪನ್ಯಾಸಕರಿಗೆ ಹೆಚ್ಚುವರಿ ವೇತನ ಬಡ್ತಿಯನ್ನು ಸರ್ಕಾರ ನೀಡಬೇಕು ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಕೂಡಲೇ ಬಡ್ತಿ ಮೂಲಕ ತುಂಬುವುದು, ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಹಲವು ಅಂಶಗಳ ಕುರಿತು ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು.

ಬಿ.ಎಸ್.ಜಾಧವ, ಎಚ್‌.ಬಿ.ಅಸೂ ಟಿ,  ಆರ್.ಎಸ್.ಪಾಟೀಲ, ಬಿ. ಬಿ. ಬಿಜ್ಜ ರಗಿ, ಆರ್. ಎನ್. ಗೌಡರ, ಕೆ. ವೈ.ಕೋರಿ, ಎನ್. ಎಂ. ಪವಾಡಿ ಗೌಡರ, ಉಮಾ ಪಠಾರೆ, ಸುರೇಶ ಸೋಮಣ್ಣವರ, ಅಶೋಕ ಅಂಗಡಿ, ಕೆ.ಜಿ.ಕಾಜಗಾರ, ಎಸ್.ಐ. ಮೇಟಿ, ಎಲ್.ಎ. ಕುಂದನ ಗಾರ, ಎಂ. ವೈ. ಮಾಲಗಾರ, ಎಸ್.ಎಚ್. ಬಾಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.