ADVERTISEMENT

ಸ್ವಚ್ಛತೆ, ಸಂಸ್ಕೃತಿ , ಸಂಕ್ರಾಂತಿ ಅರಿವಿಗೆ ಭಿತ್ತಿಚಿತ್ರ

ಡಿಎನ್ಎಸ್‌ ಕಲಾ ಅಕಾಡೆಮಿಯಿಂದ ಶಿಬಿರಗಳ ಆಯೋಜನೆ, 70ಕ್ಕೂ ಹೆಚ್ಚು ಮನೆಗಳ ಕಂಪೌಂಡ್‌ ಮೇಲೆ ರಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:14 IST
Last Updated 6 ಫೆಬ್ರುವರಿ 2017, 6:14 IST
ಗದುಗಿನ ಬಳಗಾನೂರ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಗೋಡೆಗೆ  ಚಿತ್ರ ಬಿಡಿಸುತ್ತಿರುವ ಕಲಾವಿದರು
ಗದುಗಿನ ಬಳಗಾನೂರ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಗೋಡೆಗೆ ಚಿತ್ರ ಬಿಡಿಸುತ್ತಿರುವ ಕಲಾವಿದರು   

ಗದಗ: ಸ್ವಚ್ಛತೆಯ ಅರಿವು ಮೂಡಿಸುವ ಚಿತ್ರಗಳು, ದೀಪಾವಳಿ, ಯುಗಾದಿ, ಸಂಕ್ರಾಂತಿ ಸೇರಿದಂತೆ ವಿವಿಧ ಹಬ್ಬ, ಹರಿದಿನಗಳನ್ನು ಜಾನಪದ ಕಲೆ, ಸಂಸ್ಕೃತಿಗಳ ದೃಶ್ಯ ಕಾವ್ಯ ಗದಗ–ಬೆಟಗೇರಿ ಅವಳಿ ನಗರದ ಗೋಡೆಗಳ ಮೇಲೆ ಅನಾವರಣವಾಗಿದೆ.

ನಗರದ ಬಿ.ಜಿ.ಅಣ್ಣಿಗೇರಿ ಉದ್ಯಾನ ಹಾಗೂ ರಾಧಾಕೃಷ್ಣನ್‌ ನಗರದಲ್ಲಿರುವ 70ಕ್ಕೂ ಹೆಚ್ಚು ಮನೆಗಳ ಕಂಪೌಂಡ್‌ಗೆ, ಮಿನಿ ಬಸ್‌ ನಿಲ್ದಾಣದ ಗೋಡೆಗಳಿಗೆ ಜಾನಪದ ಸಂಪ್ರದಾಯಗಳನ್ನು ಎತ್ತಿ­ತೋರುವ ಭಿತ್ತಿಚಿತ್ರಗಳನ್ನು ಬಿಡಿಸ­ಲಾಗಿದೆ. ಇಲ್ಲಿ ಸಂಚರಿಸುವ ಜನರನ್ನು ಈ ಚಿತ್ರಗಳು ಕೈಬೀಸಿ ಕರೆಯುತ್ತಿವೆ.

ನಗರದ ಸೌಂದರ್ಯ ಹೆಚ್ಚಿಸಲು, ಜಾನಪದ ಕಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಡಿ.ಎನ್.ಎಸ್‌ ಕಲಾ ಅಕಾಡೆಮಿಯಿಂದ ಈಗಾಗಲೇ ಭಿತ್ತಿಚಿತ್ರ ಬಿಡಿಸುವ 10ಕ್ಕೂ ಹೆಚ್ಚು ಶಿಬಿರ ಆಯೋಜಿಸಿದೆ. 7 ಕಲಾವಿದರು, 100ಕ್ಕೂ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ನಗರದ ಗೋಡೆಗಳಿಗೆ ಹಸೆಯ ಚಿತ್ರ ಬಿಡಿಸಿದ್ದಾರೆ.

ಟೆಂಡರ್‌: ನಗರದ ಬಳಗಾನೂರ ರಸ್ತೆ­ಯ­ಲ್ಲಿ­ರುವ ತ್ಯಾಜ್ಯ ವಿಲೇವಾರಿ ಘಟಕದ ಗೋಡೆಗಳಿಗೆ ಚಿತ್ರ ಬಿಡಿಸಲು ನಗರ­ಸಭೆ­ಯು ಸ್ವಚ್ಛ ಭಾರತ ಅಭಿಯಾನದಡಿ ಇಂಡಿಯನ್‌ ಆರ್ಟ್ಸ್‌ಗೆ ₹ 2.84 ಲಕ್ಷದ ಟೆಂಡರ್‌ ನೀಡಿದೆ. ಸುಮಾರು 5 ಅಡಿ ಎತ್ತರದ, 400 ಮೀ. ಉದ್ದವಾಗಿರುವ ತ್ಯಾಜ್ಯ ವಿಲೇವಾರಿ ಘಟಕದ ಗೋಡೆಯ ಮೇಲೆ ಜಾನಪದ ಬದುಕು ಬಿಂಬಿಸುವ ಚಿತ್ರಗಳನ್ನು ರಚಿಸಲಾಗಿದೆ. ಇಂಡಿಯನ್‌ ಆರ್ಟ್ಸ್‌ನ 30ಕ್ಕೂ ಹೆಚ್ಚು ಕಲಾವಿದರ ಕುಂಚದಿಂದ ಅರಳಿದ ಚಿತ್ರಗಳು ಜನರ ಗಮನ ಸೆಳೆಯುತ್ತಿವೆ.

ಹೇಗೆ ಬಿಡಿಸುತ್ತಾರೆ ಗೋಡೆ ಚಿತ್ರ
ಅಳಿವಿನಂಚಿನಲ್ಲಿರುವ ಜಾನಪದ ಹಬ್ಬ, ಹರಿದಿನ, ಕಲೆ, ಸಂಸ್ಕೃತಿಯನ್ನು ಜನ­ರಿಗೆ ಪರಿಚಯಿಸುವ ಉದ್ದೇಶದಿಂದ ಅಕಾಡೆಮಿಯು ನಗರದ ಪ್ರಮುಖ ಬೀದಿ­ಗಳಲ್ಲಿ ಭಿತ್ತಿಚಿತ್ರಗಳನ್ನು ರಚಿಸು­ತ್ತಿದೆ. ಗೋಡೆಗೆ ಮೊದಲು ಸುಣ್ಣ ಹಚ್ಚಲಾಗುತ್ತದೆ. ನಂತರ ಪ್ಲಾಸ್ಟಿಕ್‌ ಪೇಂಟ್‌ ಲೇಪನ ಮಾಡಲಾಗುತ್ತದೆ.

‘ಪೇಂಟ್‌ ಸಂಪೂರ್ಣವಾಗಿ ಆರಿದ ಬಳಿಕ ಕೆಂಪು ಬಣ್ಣದಿಂದ ಚಿತ್ರ ಬಿಡಿಸ­ಲಾಗುವುದು. ಉತ್ತಮ ಪ್ಲಾಸ್ಟಿಕ್‌ ಪೇಂಟ್‌ ಬಳಿಸಿದರೆ, 2 ರಿಂದ 4 ವರ್ಷಗ­ಳವರೆಗೆ ಚಿತ್ರಗಳು ಉಳಿ­ಯುತ್ತವೆ’ ಎನ್ನುತ್ತಾರೆ ಡಿ.ಎನ್.ಎಸ್. ಕಲಾ ಅಕಾಡೆಮಿಯ ಅಧ್ಯಕ್ಷ ಬಾಬು ಎನ್. ಸಿದ್ಲಿಂಗ.

‘ಯುವಕರಿಗೆ ಭಾರ­ತೀಯ ಪುರಾತನ ಸಂಸ್ಕೃತಿ,ಸಂಸ್ಕಾರ, ಕಲೆಗಳ ಕುರಿತು ತಿಳಿವಳಿಕೆ ನೀಡಲಾ­ಗುತ್ತಿದೆ. ಜತೆಗೆ ನಗರದ ಅಂದ ಹೆಚ್ಚಿ­ಸು­ವುದು ನಮ್ಮ ಮೊದಲ ಆದ್ಯತೆ­ಯಾಗಿದೆ’ ಎಂದು ಅವರು ತಿಳಿಸಿದರು.
-ಹುಚ್ಚೇಶ್ವರ ಅಣ್ಣಿಗೇರಿ

*
ಬಳಗಾನೂರ ರಸ್ತೆಯ­  ತ್ಯಾಜ್ಯ ವಿಲೇವಾರಿ ಘಟ­ಕದ ಗೋಡೆಗಳಿಗೆ ಚಿತ್ರ  ಬಿಡಿ­ಸುವ ಕಾರ್ಯ ಭರದಿಂದ ಸಾಗಿದೆ. 7 ದಿನ­ದಲ್ಲಿ ಶೇ 90ರಷ್ಟು ಕಾರ್ಯ ಮುಗಿದಿದೆ.
-ಆನಂದ ಬದಿ,
ಪರಿಸರ ಎಂಜಿನಿಯರ್‌, ನಗರಸಭೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.