ADVERTISEMENT

‘ಹುಲಿಗುಡ್ಡ ಯೋಜನೆ 2015ರಲ್ಲಿ ಪೂರ್ಣ’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2014, 6:09 IST
Last Updated 2 ಆಗಸ್ಟ್ 2014, 6:09 IST

ಮುಂಡರಗಿ: ‘ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯು 2015ರ ಹೊತ್ತಿಗೆ ಪೂರ್ಣಗೊಂಡು ಈ ಭಾಗದ ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಆ ಮೂಲಕ ರೈತರಲ್ಲಿ ಮನೆ ಮಾಡಿರುವ ಕೀಳರಿಮೆ ಮರೆಯಾಗಿ ಅವರ ಆರ್ಥಿಕ ಸ್ಥಿತಿ ಸಂಪೂರ್ಣ ಬದಲಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು. 

ಸ್ಥಳೀಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಿಯುಸಿಯು ವಿದ್ಯಾರ್ಥಿ ಜೀವನದ ಒಂದು ಬಹುಮುಖ್ಯ ಘಟ್ಟವಾಗಿದೆ. ಪಿಯುಸಿಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳು ತಗೆದುಕೊಳ್ಳುವ ನಿರ್ಧಾರವು ವಿದ್ಯಾರ್ಥಿಗಳ ಜೀವನದ ಮೈಲುಗಲ್ಲಾಗಲಿದೆ. ಆದ್ದರಿಂದ ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಶ್ರೀಮಠದ ಮಹಾದ್ವಾರವನ್ನು ಉದ್ಘಾಟಿಸಿದ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಆಶಿರ್ವಚನ ನೀಡಿ,  ‘ಜಾಗತೀಕರಣದ ಹಾಗೂ ಇಂಗ್ಲಿಷ್ ಭಾಷೆಗಳ ಪ್ರಭಾವದಿಂದ ಇಂದು ಜಗತ್ತು   ಚಿಕ್ಕದಾಗಿದೆ.  ಇಡೀ ಜಗತ್ತು ಒಂದೆ ಕುಟುಂಬದಂತೆ ಬದುಕಲು ಯತ್ನಿಸುತ್ತಿದೆ. ಅಮೆರಿಕದಂತಹ ಬಲಿಷ್ಠ ರಾಷ್ಟ್ರಗಳಲ್ಲಿ ನಮ್ಮ ದೇಶದ ಮಕ್ಕಳು ಮುಂಚೂಣಿಯಲ್ಲಿರಲು ಇಂಗ್ಲಿಷ್ ಭಾಷೆಯೇ  ಕಾರಣ’ ಎಂದು ತಿಳಿಸಿದರು.

ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಆಶಿರ್ವಚನ ನೀಡಿ, ’ಕನ್ನಡ ನಮ್ಮ ಮಾತೃ ಭಾಷೆಯಾದರೂ ನಾವು ಇಂಗ್ಲಿಷ ಭಾಷೆಯನ್ನು ಕಲಿಯಬೇಕು. ಗ್ರಾಮೀಣ ಭಾಗದ ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಐಎಎಸ್‌, ಐಪಿಎಸ್‌, ಡಾಕ್ಟರ್‌, ಇಂಜಿನಿಯರ್ಗಳಾಗಬೇಕು. ಅದಕ್ಕೆ ಪೂರಕವಾಗಿ ಅವರಿಗೆ ಇಂಗ್ಲಿಷ್ ಭಾಷಾ ಜ್ಞಾನವನ್ನು ನೀಡಬೇಕು’ ಎಂದು ತಿಳಿಸಿದರು.

ನಿಜಗುಣಾನಂದ ಸ್ವಾಮೀಜಿ ಆಶಿರ್ವಚನ ನೀಡಿ, ’ಸರ್ಕಾರವು ಕೆಲವು ಜನರನ್ನು ವಿವಿಧ ವಿಷಯಗಳಿಗೆ ರಾಯಭಾರಿಗಳನ್ನಾಗಿ ನಿಯಮಿಸುತ್ತದೆ. ಅಧೋಗತಿಗೆ ಇಳಿಯುತ್ತಿರುವ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರ್ಕಾರವು ಅರ್ಹ ಮಠಾಧೀಶರನ್ನು ಗುರುತಿಸಿ ಅವರನ್ನು ಆಧ್ಯಾತ್ಮ ಮತ್ತು ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ’ಈ ಭಾಗದ ಶೇಕಡಾ 80ರಷ್ಟು ಜನರು  ಸಾಕ್ಷರರಾಗಲು ಈ ಭಾಗದ ಮಠ ಮಾನ್ಯಗಳೆ ಕಾರಣ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಮಾತನಾಡಿದರು.

ವಾಸಣ್ಣ ಕುರಡಗಿ, ಜಿಲ್ಲಾಧಿಕಾರಿ ಎನ್‌.ಎಸ್‌. ಪ್ರಸನ್ನ­ಕುಮಾರ, ಜಿ.ಎನ್‌.ರಾಮಕೃಷ್ಣೇಗೌಡ, ಬಿ.ವಿ.­ರಾಜೇಂದ್ರ ಪ್ರಸಾದ, ಬಿ.ಎಸ್‌.ಗೌಡರ, ಎಂ.ಎ.ರಡ್ಡೇರ, ಎನ್‌.ನಾಗ­ರಾಜ, ಹೇಮಗಿರೀಶ ಹಾವಿನಾಳ, ಭಾರತಿ ಹಕ್ಕಿ, ಮಹೇಶ ರಂಗಣ್ಣವರ, ನಾರಾಯಣಪ್ಪ ಇಲ್ಲೂರ, ನಾಗೇಶ ಹುಬ್ಬಳ್ಳಿ, ಈಶ್ವರಪ್ಪ ಹಂಚಿನಾಳ, ಮಹೇಶ ಮಾಲಗತ್ತಿ  ಮತ್ತಿತರರು ಹಾಜರಿದ್ದರು. ಆಡಳಿತಾಧಿಕಾರಿ ಎಸ್‌.ಎಸ್‌.ಪಟ್ಟಣಶೆಟ್ಟರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.