ADVERTISEMENT

ಮುಂಡರಗಿಯಲ್ಲಿ ಸದ್ದಿಲ್ಲದೆ ಹಸಿರು ಅಭಿಯಾನ..!

ಪ್ರತಿ ಭಾನುವಾರ ಪಟ್ಟಣದಲ್ಲಿ ಲಶ್ರಮದಾನ; ಸಸಿಗಳನ್ನು ನೆಟ್ಟು ಪೋಷಣೆ

ಕಾಶಿನಾಥ ಬಿಳಿಮಗ್ಗದ
Published 4 ಜುಲೈ 2018, 17:54 IST
Last Updated 4 ಜುಲೈ 2018, 17:54 IST
ಮುಂಡರಗಿ ಪಟ್ಟಣದ ಹೊರ ವಲಯದಲ್ಲಿ ಸಸಿ ನೆಡುತ್ತಿರುವ ಹಸಿರು ಅಭಿಯಾನ ತಂಡದ ಕಾರ್ಯಕರ್ತರು
ಮುಂಡರಗಿ ಪಟ್ಟಣದ ಹೊರ ವಲಯದಲ್ಲಿ ಸಸಿ ನೆಡುತ್ತಿರುವ ಹಸಿರು ಅಭಿಯಾನ ತಂಡದ ಕಾರ್ಯಕರ್ತರು   

ಮುಂಡರಗಿ: ಅರಣ್ಯ ಇಲಾಖೆ ಜತೆಗೆ ಕೈಜೋಡಿಸಿರುವ ಪಟ್ಟಣದ ಯುವಕರ ತಂಡವೊಂದು ಸದ್ದಿಲ್ಲದೆ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡಿದೆ.

ಬೆಂಗಳೂರು ಮೂಲದ ಹಸಿರು ಮಿಶನ್‌ ಸಂಘಟನೆಯಡಿ ಕಾರ್ಯಪ್ರವೃತ್ತರಾಗಿರುವ ಪಟ್ಟಣದ ಯುವಕರು, ಪ್ರತಿ ಭಾನುವಾರ ನಿರ್ದಿಷ್ಟ ಪ್ರದೇಶದಲ್ಲಿ ಸಸಿಗಳನ್ನು ನೆಡುತ್ತಾರೆ. ಇದಕ್ಕಾಗಿ ಅಲ್ಲಿನ ಸ್ಥಳೀಯ ನಿವಾಸಿಗಳ ಸಹಾಯವನ್ನೂ ಪಡೆದುಕೊಳ್ಳುತ್ತಾರೆ. ಈ ತಂಡದಲ್ಲಿ ಹೆಚ್ಚಿನವರು ಉದ್ಯೋಗಿಗಳು, ವ್ಯಾಪಾರಿಗಳು. ವಾರಾಂತ್ಯದ ದಿನವನ್ನು ಹಸಿರೀಕರಣಕ್ಕೆ ಮೀಸಲಿಟ್ಟಿದ್ದಾರೆ.

ಪ್ರತಿ ಭಾನುವಾರ ಬೆಳಿಗ್ಗೆ 7.30ರಿಂದ 10.30ರವರೆಗೆ ಪಟ್ಟಣದ ಯಾವುದಾದರೂ ಒಂದು ಭಾಗದಲ್ಲಿ ಯಾವುದೇ ಸದ್ದುಗದ್ದಲ ಇಲ್ಲದೆ, ತಮ್ಮ ಪಾಡಿಗೆ ತಾವು ಸಸಿ ನೆಡುತ್ತಿರುತ್ತಾರೆ. ನೆಟ್ಟ ಸಸಿಗಳಿಗೆ ನೀರುಣಿಸುವುದು, ಬೇಲಿ ಹಾಕುವುದು, ಸುತ್ತಲಿನ ಪರಿಸರ ಸ್ವಚ್ಛಗೊಳಿಸುವುದು ಈ ಕಾರ್ಯಗಳನ್ನೂ ಶ್ರದ್ಧೆಯಿಂದ ಮಾಡುತ್ತಾರೆ.

ADVERTISEMENT

ಈಗಾಗಲೇ ಪಟ್ಟಣದ ಲಿಂಗರಾಜ ನಗರ, ರಾಘವೇಂದ್ರ ಮಠದ ಆವರಣ, ಗಾಯತ್ರಿ ಮುಕ್ತಿ ಮಂದಿರ, ಕೈಗಾರಿಕಾ ಪ್ರದೇಶ, ನಾಗರಳ್ಳಿ ರಸ್ತೆಯ ಬಳಿ ಇರುವ ಪುರಸಭೆ ಉದ್ಯಾನ ಹೀಗೆ ಹಲವು ಭಾಗಗಳಲ್ಲಿ ಈ ತಂಡ ಸಸಿಗಳನ್ನು ನೆಟ್ಟಿದೆ.

ಪಟ್ಟಣದ ಆನಂದ, ದಯಾನಂದ, ವೀರೇಶ ಸಜ್ಜನರ, ರವಿ ಕುಂಬಾರ, ಶಂಕರಗೌಡ ಪಾಟೀಲ, ಚಂದ್ರಕಾಂತ ಇಟಗಿ, ಸಂಪತ್ ಕಾಗೆ, ವಿನೋದ ಸೋನಿ, ತೇಜು ಭೂಮರಡ್ಡಿ, ಬದ್ರಿನಾಥ, ರಾಘವೇಂದ್ರ ಪಟಗೆ, ದಯಾನಂದ ಅಂಗಡಿ, ಬಿ.ಜಾದವ್, ರವೀಂದ್ರ ಜೈನ್, ವಿನಾಯಕ, ವಸಂತ ಕೋಟಿ, ಪ್ರಾಂತ ಸಜ್ಜನ, ವಸಂತ ಸಂಕನೂರ, ಬಸವರಾಜ ಬಳಿಗಾರ ಹಸಿರು ಅಭಿಯಾನ ಕಾರ್ಯಪಡೆಯಲ್ಲಿದ್ದಾರೆ.

‘ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಈ ಯುವಕರು ಕೈಗೊಂಡಿರುವ ಕಾರ್ಯ ಶ್ಲಾಘನೀಯ’ ಎಂದು ಅನ್ನದಾನೀಶ್ವರ ಮಠದ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಮುಂಗಾರು ಪ್ರಾರಂಭ ಆಗಿರುವುದರಿಂದ ಸಸಿ ನಡೆಸಲು ಆದ್ಯತೆ ನೀಡಿದ್ದೇವೆ. ನಮ್ಮ ಜತೆಗೆ ಸ್ಥಳೀಯ ‘ಹೊಸ ಚಿಗುರು’ ಸಂಘನೆ ಕಾರ್ಯಕರ್ತರು ಕೈಜೋಡಿಸಿದ್ದು, ಹೆಚ್ಚಿನ ಬಲ ಬಂದಿದೆ
- ಸಂತೋಷ ಬಳ್ಳೊಳ್ಳಿ,ತಂಡದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.