ADVERTISEMENT

ರಾಮಮಂದಿರ ನಿರ್ಮಾಣದಲ್ಲಿ ಮುಂಡರಗಿ ಶಿಲ್ಪಿ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಆಹ್ವಾನ

ಕಾಶಿನಾಥ ಬಿಳಿಮಗ್ಗದ
Published 9 ಡಿಸೆಂಬರ್ 2023, 6:09 IST
Last Updated 9 ಡಿಸೆಂಬರ್ 2023, 6:09 IST
ಶಿಲ್ಪ ಕೆತ್ತನೆಯ ಕಾಯಕದಲ್ಲಿ ತೊಡಗಿರುವ ಮುಂಡರಗಿಯ ಯುವಶಿಲ್ಪಿ ನಾಗಮೂರ್ತಿಸ್ವಾಮಿ ಪಂಚಾನನಗುರು
ಶಿಲ್ಪ ಕೆತ್ತನೆಯ ಕಾಯಕದಲ್ಲಿ ತೊಡಗಿರುವ ಮುಂಡರಗಿಯ ಯುವಶಿಲ್ಪಿ ನಾಗಮೂರ್ತಿಸ್ವಾಮಿ ಪಂಚಾನನಗುರು   

ಮುಂಡರಗಿ (ಗದಗ ಜಿಲ್ಲೆ): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಲು ಪಟ್ಟಣದ ಯುವಶಿಲ್ಪಿ ನಾಗಮೂರ್ತಿಸ್ವಾಮಿ ಪಂಚಾನನಗುರು ಅವರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ಆಹ್ವಾನ ಬಂದಿದೆ.

ಮೂಲತಃ ಕೊಪ್ಪಳ ತಾಲ್ಲೂಕಿನ ಕಾತರಕಿ ಗ್ರಾಮದವರಾದ ನಾಗಮೂರ್ತಿಸ್ವಾಮಿ, ಹಲವು ವರ್ಷಗಳಿಂದ ಪಟ್ಟಣದಲ್ಲಿ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯ ವಿವಿಧ ಭಾಗಗಳಿಗೆ ಸುಂದರವಾದ ಕಲ್ಲಿನ ಮೂರ್ತಿಗಳನ್ನು ತಯಾರಿಸಿಕೊಟ್ಟಿದ್ದಾರೆ.

ಟ್ರಸ್ಟ್‌ನ ಹಿರಿಯ ಮುಖಂಡರು ನಾಗಮೂರ್ತಿಸ್ವಾಮಿ ಅವರಿಗೆ ಈಚೆಗೆ ಕರೆ ಮಾಡಿ, ರಾಮ ಮಂದಿರ ನಿರ್ಮಾಣದಲ್ಲಿ ಸಣ್ಣ, ಪುಟ್ಟ ಮೂರ್ತಿ ಕೆತ್ತನೆ, ಸ್ತಂಭ ಹಾಗೂ ಇನ್ನಿತರ ಕಲ್ಲಿನ ಕಟ್ಟಡ ಕಾರ್ಯ ನಿರ್ವಹಿಸಲು ಆಹ್ವಾನಿಸಿದ್ದು, ಶುಕ್ರವಾರ ಮುಂಡರಗಿಯಿಂದ ಅವರು ಅಯೋಧ್ಯೆಗೆ ತೆರಳಿದರು. ಅಲ್ಲಿ ಅವರು 45 ದಿನ ಕೆಲಸ ಮಾಡಲಿದ್ದು ನಂತರ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಕರಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ADVERTISEMENT

ಬಾಲ್ಯದಲ್ಲಿಯೆ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವರು, ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯಕ್ಕೆ ಸೇರಿಕೊಂಡರು. ಅಲ್ಲಿ ಹಲವು ವರ್ಷ ಶಿಲ್ಪಕಲೆಯ ತರಬೇತಿ ಪಡೆದು ಮುಂಡರಗಿಯ ಶಿಲ್ಪಿ ವೆಂಕಟೇಶ ಸುತಾರ  ಬಳಿ ಕೆಲಸ ಮಾಡಿ, ಈಗ ಸ್ವತಂತ್ರವಾಗಿ ಪಟ್ಟಣದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ದೊರೆಯುವ ಕರಿಕಲ್ಲುಗಳನ್ನು (ಕೃಷ್ಣಶಿಲೆ) ಬಳಸಿ ಮೂರ್ತಿ ತಯಾರಿಸುತ್ತಾರೆ. 

‘ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದು ಜನ್ಮ ಪಾವನ ಮಾಡಿಕೊಳ್ಳುವುದು ಬಹುಜನರ ಕನಸಾಗಿರುತ್ತದೆ. ಆದರೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುವ ಸೌಭಾಗ್ಯ ತೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯ' ಎಂದು ನಾಗಮೂರ್ತಿಸ್ವಾಮಿ ಹರ್ಷವ್ಯಕ್ತಪಡಿಸಿದರು.

ನಾಗಮೂರ್ತಿಸ್ವಾಮಿ ತಯಾರಿಸಿರುವ ಆಕರ್ಷಕ ಯಕ್ಷಕನ್ಯ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.