ADVERTISEMENT

ಉಚಿತ ಬಸ್‌ಪಾಸ್; ಎಲ್ಲರಿಗೂ ವಿಸ್ತರಿಸಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2017, 8:24 IST
Last Updated 19 ಜೂನ್ 2017, 8:24 IST

ಹಾಸನ: ‘ಉಚಿತ ಬಸ್‌ ಪಾಸ್‌ ಸೌಲಭ್ಯವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ನೀಡದೆ ಎಲ್ಲ ವರ್ಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಆಗ್ರಹಿಸಿದರು.

‘ಕಾಂಗ್ರೆಸ್‌ ಸರ್ಕಾರ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ವಿತರಿಸುತ್ತಿದೆ. ಇದು ಇತರೆ  ವರ್ಗದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ.  ಹಿಂದುಳಿದ ವರ್ಗಗಳಿಗೆ ಸವಲತ್ತು ನೀಡಲು ನನ್ನ ಯಾವುದೇ ಅಭ್ಯಂತರ ಅಥವಾ ವಿರೋಧವಿಲ್ಲ. ಆದರೆ, ಶಾಲಾ ಹಂತದಿಂದಲೇ ಮಕ್ಕಳಿಗೆ ಅಸಮಾನತೆ ಮೂಡಿಸುವುದು  ಸರಿಯಲ್ಲ’ ಎಂದರು.

ಇತ್ತೀಚೆಗೆ ಬಾಲಿವುಡ್‌ನ ಹಿಂದೆ ಚಿತ್ರನಟ ಸಲ್ಮಾನ್‌ಖಾನ್‌ ‘ದೇಶದ ಯುದ್ಧ  ಪ್ರೇಮಿಗಳಿಗೆ ಬಂದೂಕು ಮತ್ತು ಆಯಧ ಕೊಟ್ಟು ಪಾಕಿಸ್ತಾನ ಗಡಿಯತ್ತ ಕಳುಹಿಸಿ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.   ಸ್ವಾರ್ಥ ಸಾಧನೆಗೆ ಮತ್ತು ಚಲನಚಿತ್ರ ಪ್ರದರ್ಶನ ಉದ್ದೇಶದಿಂದ ಇಂತಹ ಲಜ್ಜೆಗೇಡಿತದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.

ADVERTISEMENT

ದೇಶಕ್ಕೆ ಸ್ವಾತಂತ್ರ ಬಂದು 7 ದಶಕಗಳು ಕಳೆದಿವೆ. ಭಾರತ ಹಾಗೂ ಪಾಕಿಸ್ತಾನ  ನಡುವೆ ಈ ವರೆಗೆ 42  ಬಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಸಲ್ಮಾನ್‌ ಖಾನ್‌ ಬಂದೂಕು ಕೊಟ್ಟರೆ  ಶ್ರೀರಾಮ ಸೇನೆಯ 5 ಸಾವಿರ ಕಾರ್ಯ ಕರ್ತರು ಪಾಕಿಸ್ತಾನದ ಗಡಿಯತ್ತ ಹೋಗಲು ಸಿದ್ಧ ಎಂದು ಸವಾಲು ಹಾಕಿದರು.

ಜಮ್ಮು– ಕಾಶ್ಮೀರದಲ್ಲಿ  ಪ್ರತ್ಯೇಕವಾದಿಗಳು ಪೆಟ್ರೋಲ್‌ ಬಾಂಬ್‌ ಎಸೆಯುವುದು ಹಾಗೂ ಸೈನಿಕರ ಮೇಲೆ ನಡೆಸುತ್ತಿರುವ ಹಲ್ಲೆ ನೋವುಂಟು ಮಾಡಿವೆ. ಕೇಂದ್ರ ಸರ್ಕಾರ ಸೈನಿಕರಿಗೆ ನೈತಿಕ ಬೆಂಬಲ ಮತ್ತು ಆತ್ಮ ವಿಶ್ವಾಸ ತುಂಬಬೇಕು. ಈ ನಿಟ್ಟಿನಲ್ಲಿ  ಶ್ರೀರಾಮ ಸೇನೆಯಿಂದ ಜುಲೈ 3 ರಂದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 11 ರಿಂದ 12 ರ ವರೆಗೆ ‘ಯೋಧರಿಗೆ ನಮ್ಮ ಬೆಂಬಲ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿವೃತ್ತ  ಸೈನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು. 

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ  ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುವಂತೆ   ಸಚಿವ ಬಿ.ರಮಾನಾಥ ರೈ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ ಅವರಿಗೆ ತಾಕೀತು ಮಾಡಿರುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಸಂಘಟನೆಗಳು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದಿಲ್ಲ. ಈ ಸಂಬಂಧ ಪ್ರಭಾಕರ ಭಟ್
ವಿರುದ್ಧ ಸಚಿವರು ಹೇಳಿಕೆ ನೀಡಿರುವುದು ಸರಿಯಲ್ಲ ಎಂದ ಹೇಳಿದರು.

ಶ್ರೀರಾಮ ಸೇನೆಯ ರಾಜ್ಯ ವಕ್ತಾರರಾಗಿ ಎಂ.ಎಸ್‌.ಹರೀಶ್ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಶಿವ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಗೋಷ್ಠಿಯಲ್ಲಿ ಕಾರ್ಯದರ್ಶಿ ಕುಲಕರ್ಣಿ, ಮಹೇಶ್ ಕೊಪ್ಪ,  ಪ್ರವೀಣ್ ವಾಲ್ಕೆ, ಜಿಲ್ಲಾ ಘಟಕದ ಅಧ್ಯಕ್ಷ ಜಾನೆಕೆರೆ ಹೇಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.