ADVERTISEMENT

ಕೇಂದ್ರ ಸರ್ಕಾರ ರೈತ ವಿರೋಧಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:03 IST
Last Updated 14 ಮಾರ್ಚ್ 2017, 6:03 IST

ಬೇಲೂರು: ‘ಪ್ರಧಾನಿ ನರೇಂದ್ರ ಮೋದಿಅವರ ಸರ್ಕಾರ ಜನರ ಮೇಲೆ ತೆರಿಗೆ ಹಾಕುವ ಸರ್ಕಾರವಾಗಿದ್ದು ರೈತರು ಮತ್ತು ಜನರ ಪರವಾದ ಸರ್ಕಾರವಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಶಿವರಾಂ ಇಲ್ಲಿ ವ್ಯಂಗ್ಯವಾಡಿದರು.

ನೋಟು ರದ್ದತಿಯಿಂದ ಜನರಿಗಾಗಿರುವ ತೊಂದರೆಯ ಕುರಿತು ತಾಲ್ಲೂಕು ಕಾಂಗ್ರೆಸ್‌ ಪಕ್ಷದ ವತಿಯಿಂದ ಸೋಮವಾರ ಇಲ್ಲಿ ಏರ್ಪಡಿಸಿದ್ದ ‘ಜನ ವೇದನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಟು ರದ್ದತಿಯಿಂದ ಸಮಾಜದ ಮೇಲೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿದೆ. ಇದರಿಂದ ರಾಜ್ಯಕ್ಕೆ ₹ 1 ಸಾವಿರ ಕೋಟಿ ನಷ್ಟ ಸಂಭವಿಸಿದ್ದರೆ, ದೇಶಕ್ಕೆ ₹ 3ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದರು.

ADVERTISEMENT

ನಮ್ಮ ಹಣ ಪಡೆಯಲು ನಾವು ತೊಂದರೆ ಎದುರಿಸ ಬೇಕಾದ ದುಸ್ಥಿತಿ ಇದೆ. ನೋಟು ರದ್ದತಿ ವಿಷಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿಫಲವಾಗಿದೆ. ರಾಜ್ಯ ಸೇರಿದಂತೆ ದೇಶದಲ್ಲಿನ ಭೀಕರ ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಪರವಾಗಿದ್ದರೆ, ರಾಷ್ಟ್ರದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ವೈ.ಎನ್‌.ರುದ್ರೇಶ್‌ಗೌಡ ಮಾತನಾಡಿ ‘ಬೇಲೂರಿನ ಯಗಚಿ ಡ್ಯಾಂ ನಿರ್ಮಿಸಿರುವುದು ಈ ತಾಲ್ಲೂಕಿನ ಜನರಿಗಾಗಿ ಅಲ್ಲ. ಈ ಜಲಾಶಯದ ನೀರು ಸಂಪೂರ್ಣವಾಗಿ ಬೇರೆ ತಾಲ್ಲೂಕಿನ ಜನರಿಗೆ ಉಪಯೋಗವಾಗುತ್ತಿದೆ’ ಎಂದು ಆರೋಪಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್‌, ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಎಸ್‌.ಎಂ. ಆನಂದ್‌, ಚನ್ನಕೇಶವ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್‌, ಜಿ.ಪಂ. ಸದಸ್ಯರಾದ ಸೈಯ್ಯದ್ ತೌಫಿಕ್‌, ಎಚ್‌.ಎಂ.ಮಂಜಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎನ್‌.ಲಿಂಗೇಶ್‌,ಕಾಂಗ್ರೆಸ್‌ ಮುಖಂಡರಾದ ವೈ.ಎನ್‌.ಕೃಷ್ಣಕುಮಾರ್‌, ಬಿ.ಕೆ.ಚಂದ್ರಕಲಾ, ಬಿ.ಎ.ಜಮಾಲುದ್ದೀನ್‌, ಅರುಣ್‌ ಕುಮಾರ್‌, ನಾಗರಾಜ್‌, ಬಿ.ಎಲ್‌.ಧರ್ಮೇಗೌಡ ಇದ್ದರು.

ಜೆಡಿಎಸ್‌ನಿಂದ ಅನ್ಯಾಯ
ಬೇಲೂರು:
‘ಯಗಚಿ ನೀರು ಸೇರಿದಂತೆ ಎಲ್ಲಾ ವಿಚಾರದಲ್ಲೂ ಬೇಲೂರು ತಾಲ್ಲೂಕಿನ ಜನರಿಗೆ ಜಿಲ್ಲೆಯ ಜೆಡಿಎಸ್‌ ಕುಟುಂಬದಿಂದ ಅನ್ಯಾಯವಾಗಿದೆ. ಈ ತಾಲ್ಲೂಕಿನ ಜನರನ್ನು ನಿರಂತರವಾಗಿ ಶೋಷಣೆ ಮಾಡಿಕೊಂಡು ಬಂದಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಶಿವರಾಂ ಆರೋಪಿಸಿದರು.

ಇಲ್ಲಿ ಏರ್ಪಡಿಸಿದ್ದ ಜನ ವೇದನ ಸಭೆಯಲ್ಲಿ ಮಾತನಾಡಿದ ಅವರು ಯಗಚಿ ಜಲಾಶಯ ನಿರ್ಮಾಣದಿಂದ ಬೇಲೂರಿನ ಜನರಿಗೆ ಉಪಯೋಗವಾಗುತ್ತಿಲ್ಲ. ಈ ನೀರು ಹೊಳೆನರಸೀಪುರ ಸೇರಿದಂತೆ ಇತರೆ ತಾಲ್ಲೂಕಿನ ಜನರಿಗೆ ಅನುಕೂಲವಾಗುತ್ತಿದೆ. ಹೇಮಾವತಿ ಅಣೆಕಟ್ಟೆ ವಿಚಾರದಲ್ಲೂ ಜೆಡಿಎಸ್‌ನವರಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಹಳೇಬೀಡು–ಮಾದಿಹಳ್ಳಿ ಜನರಿಗೆ ಕುಡಿಯುವ ನೀರು ಕೊಡುವ ಯೋಜನೆ ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಾತಿಯಾಯಿತು. ಈಗ ಲೈನಿಂಗ್‌ ಕಾಮಗಾರಿಗಾಗಿ ₹ 8.42 ಯೋಜನೆ ರೂಪಿಸಲಾಗಿದೆ.

ರಣಘಟ್ಟ ಒಡ್ಡಿನಿಂದ ಬಿಕ್ಕೋಡು ಭಾಗದ 3700 ಎಕರೆ ಪ್ರದೇಶಕ್ಕೆ ನೀರು ಹರಿಸಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಹಳೇಬೀಡು ಮತ್ತು ಜಾವಗಲ್‌ ಭಾಗದ ಕರೆಗಳಿಗೆ ನೀರು ಹರಿಸಲು ಯೋಜನೆಯನ್ನು ಪರಿಷ್ಕರಿಸಲಾಗಿದೆ. ಯಗಚಿ ಹಿನ್ನೀರಿನ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಬೇಲೂರು ತಾಲ್ಲೂಕಿನ 374 ಹಳ್ಳಿಗಳಿಗೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಒಂದಲ್ಲ ಒಂದು ರೀತಿ ಯೋಜನೆ ರೂಪಿಸಿ ನೀರು ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.