ADVERTISEMENT

ಕೇರಳದಲ್ಲಿ ಓಣಂ: 60 ಲೋಡ್‌ ಹೂ ರವಾನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 8:19 IST
Last Updated 3 ಸೆಪ್ಟೆಂಬರ್ 2017, 8:19 IST
ಕೇರಳದ ಓಣಂ ಹಬ್ಬಕ್ಕೆ ಮಾರಾಟಕ್ಕಾಗಿ ಕೊಂಡೊಯ್ಯಲು ಅರಕಲಗೂಡಿನಲ್ಲಿ ವರ್ತಕರು ಸಂಗ್ರಹಿಸಿರುವ ಸೇವಂತಿಗೆ ಹೂ
ಕೇರಳದ ಓಣಂ ಹಬ್ಬಕ್ಕೆ ಮಾರಾಟಕ್ಕಾಗಿ ಕೊಂಡೊಯ್ಯಲು ಅರಕಲಗೂಡಿನಲ್ಲಿ ವರ್ತಕರು ಸಂಗ್ರಹಿಸಿರುವ ಸೇವಂತಿಗೆ ಹೂ   

ಅರಕಲಗೂಡು: ಕೇರಳದ ಓಣಂ ಹಬ್ಬದ ಸಂದರ್ಭದಲ್ಲಿ ಮಾರಾಟ ಮಾಡುವುದಕ್ಕಾಗಿ ಸುಮಾರು 200 ಹೂವಿನ ವ್ಯಾಪಾರಿಗಳು ಹೂವಿನೊಂದಿಗೆ ಶನಿವಾರ ರಾತ್ರಿ ಕೇರಳಕ್ಕೆ ತೆರಳಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ ಸುಮಾರು 60 ಲೋಡ್‌ಗಳಷ್ಟು ಹಳದಿ, ಬಿಳಿ, ಸೇವಂತಿಗೆ, ಬಟನ್ಸ್‌, ರುದ್ರಾಕ್ಷಿ ಹೂ, ಕಾಕಡ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ವ್ಯಾಪಾರಸ್ಥರು ವಾಹನಗಳಲ್ಲಿ ಕೊಂಡೊಯ್ದರು.

ತಾಲ್ಲೂಕಿನ ಶಣವಿನಕುಪ್ಪೆ, ಸಂತೆಮರೂರು, ಬಿಟ್ಟಗೋಡನಹಳ್ಳಿ, ಅತ್ನಿ, ಕೊಣನೂರು, ಕೇರಳಾಪುರ, ಮರಿತಮ್ಮನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ವಿವಿಧ ಜಾತಿಯ ಹೂಗಳನ್ನು ಬೆಳೆಯಲಾಗುತ್ತಿದೆ. ಗೌರಿ ಹಬ್ಬದ ನಂತರ ದಸರಾ, ದೀಪಾವಳಿಯವರೆಗೆ ಹೂವಿಗೆ ಸಳೀಯವಾಗಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ಹೊರ ರಾಜ್ಯಗಳ ಹಬ್ಬಗಳಿಗೆ ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಕೇರಳದಲ್ಲಿ ನಡೆಯುವ ಓಣಂ ಹಬ್ಬದಂದು ಇಲ್ಲಿಯ ಹೂಗಳಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗುತ್ತದೆ. ಸುಮಾರು 50 ವರ್ಷಗಳಿಂದ ತಾಲ್ಲೂಕಿನ ಹೂವಿನ ವ್ಯಾಪಾರಸ್ಥರು ಹೂ ಮಾರಾಟಕ್ಕಾಗಿ ಕೇರಳಕ್ಕೆ ತೆರಳುತ್ತಿದ್ದಾರೆ. ಕೇರಳಕ್ಕೆ ರಾಜ್ಯದ ವಿವಿಧ ಭಾಗಗಳಿಂದಲೂ ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಹೂರಾಶಿ ಮಾರಾಟಕ್ಕಾಗಿ ಬರುತ್ತದೆ ಎಂದು ವರ್ತಕ ಸುರೇಶ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.